Friday, June 6, 2014

ಟ್ಯುಲಿಪ್ ಹೂಗಳು..

ಟ್ಯುಲಿಪ್ ಹೂಗಳನ್ನು ನೋಡಲು Wooden Shoe Tulip Farm ಗೆ ಹೋಗಿದ್ವಿ ಸ್ವಲ್ಪ ದಿನಗಳ ಹಿಂದೆ. ೧೫-೨೦ ಎಕರೆಗಳಷ್ಟು ಹೂಗಳು. ಬಣ್ಣ ಬಣ್ಣದ ಹೂಗಳ ಫೋಟೊ ತೆಗೆದಷ್ಟು ಸಾಲದು.  ೧೯೫೦ ರಿಂದ  ಹೂಗಳನ್ನು ಬೆಳೆಯುತ್ತಿದ್ದರೂ ಮಾರಾಟದಲ್ಲಿ ಅಷ್ಟೇನೂ ಲಾಭವಿರಲಿಲ್ಲವಂತೆ. ೧೯೮೫ ರಲ್ಲಿ ಇದನ್ನು ಎಂಟ್ರಿ ಫಿ ತೆಗೆದುಕೊಂಡು ಪ್ರದರ್ಶನಕ್ಕೆ ಬಿಟ್ಟರಂತೆ. ಸಾಮಾನ್ಯವಾಗಿ ಒಂದು ತಿಂಗಳು ನಡೆಸುವ ಈ ಪ್ರದರ್ಶನದಲ್ಲಿ ತುಂಬಾ ಜನರು ಫೋಟೋಗ್ರಫಿ ಗೋಸ್ಕರನೇ  ಬರುತ್ತಾರೆ. ಇವರ ವೆಬ್ಸೈಟ್ ಮತ್ತು ಫೇಸ್ಬುಕ್ ನಲ್ಲಿ ಆ ದಿನದ ವಾತವರಣ, ಹೂ ಗಳ ವಿವರ ಮತ್ತು ಆ ದಿನದ ಚಟುವಟಿಗೆಗಳನ್ನು ಹಾಕುತ್ತಾರೆ. ಮಕ್ಕಳಿಗಾಗಿ ವಿವಿಧ ತರಹವಾದ ಚಟುವಟಿಗೆಗಳನ್ನು ನಡೆಸುತ್ತಾರೆ. ಹೀಗೆ ಒಂದು ಕಾಲದಲ್ಲಿ ನಷ್ಟದಲ್ಲಿದ್ದ ಫಾರ್ಮ್ ಈಗ ಯದ್ಯಾ ತದ್ವಾ ಲಾಭ ಮಾಡುತ್ತಿದೆ.















ಅಮೇರಿಕಾಕ್ಕೆ ಬರುವ ಮುಂಚೆ ನನಗೆ ಅನ್ನಿಸುತ್ತಿತ್ತು, "ಅಮೇರಿಕ ಮುಂದುವರಿದ ದೇಶ ಇಲ್ಲಿ ಕೃಷಿ ಮಾಡುವವರು ಯಾರು ?" ಎಂದು. ನಮ್ಮ ದೇಶದಲ್ಲಿ ರೈತರೆಲ್ಲಾ ಬಡವರು. ಹೊಟ್ಟೆ ತುಂಬಿಸಿಕೊಳ್ಳಲಾಗದೇ ರೈತಾಪಿ ಬಿಡುವ ಜನರೇ ಜಾಸ್ತಿ. ಆದರೆ ಇಲ್ಲಿ ಹಾಗಲ್ಲ. ಅಗ್ರಿಕಲ್ಚರ್ ಮಾಡುವವರಿಗೆ ಎಲ್ಲಾ ಸೈಕರ್ಯ ವಿದೆ. ನೂರಾರು ಎಕರೆ ಭೂಮಿಯಿದೆ. ಅತ್ಯಾಧುನಿಕ ರೀತಿಯಲ್ಲಿ ಬೆಳೆ ಬೆಳೆಯುತ್ತಾರೆ. ಎಲ್ಲ ಕೆಲಸಗಳನ್ನು ಯಂತ್ರಗಳೇ ಮಾಡುತ್ತವೆ. ಗದ್ದೆಯಲ್ಲಿ ಕೆಲಸ ಮಾಡುವವರೇ ಹೆಚ್ಚಾಗಿ ಕಾಣಿಸುವುದಿಲ್ಲ. ಇವರ ಮನೆಯ ಮುಂದೆ ೪-೫ ಕಾರ್ ಗಳು ನಿನ್ತಿರುತ್ತವೆ.  ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನ ಭೂಮಿ ಅತಿ ಫಲವತ್ತಾದದ್ದು . ನೀರಿಗಂತೂ ಭರವೇ ಇಲ್ಲ.  ಹೇರಳವಾದ ನೈಸರ್ಗಿಕ ಸಂಪನ್ಮೂಲ ಮತ್ತು ಮನುಷ್ಯನ ಬುದ್ಧಿವಂತಿಕೆಯಿಂದ ಮಾಡಿಕೊಂಡ ಸೌಕರ್ಯದಿಂದ ಇಲ್ಲಿ ಮಾನವ ಸಂಪನ್ಮೂಲದ ಕೊರತೆಯಿದ್ದರೂ ಕೃಷಿ ಇನ್ನೂ ಕೂಡ ಇಲ್ಲಿನ ಪ್ರಮುಖ ಉದ್ಯೋಗ. ನಮ್ಮ ದೇಶದಲ್ಲೂ ಇಂತಹ ಒಂದು ದಿನ ಬರಲಿ ಎಂದು ಆಶಿಸುತ್ತೆನೆ.

Sunday, May 18, 2014

ಹಪ್ಪಳದ ಜೊತೆ ಊರ ನೆನಪು!

ಹಲಸಿನ ಕಾಯಿ ಹಪ್ಪಳ ಕರಿಯುತ್ತಿದ್ದೆ ಅಮ್ಮ ಮಾಡಿಕೊಟ್ಟಿದ್ದು. ೨೫-೩೦ ಹಪ್ಪಳಗಳ ಒಂದೊಂದು ಕಟ್ಟನ್ನು ನೀಟಾಗಿ ಮಾಡಿದ್ದರು. ಹಪ್ಪಳವನ್ನು ಕಟ್ಟಿದ್ದು ಬಟ್ಟೆಯ ದಾರದಲ್ಲಿ.  ಅಮ್ಮನ ಸೀರೆಯಲ್ಲವೇ? ಇದು ನನ್ನ ಚೂಡಿದಾರ ಕೂಡಾ ಆಗಿತ್ತಲ್ಲ ಅಂದುಕೊಂಡೆ !

ಹಾಸ್ಟೆಲ್ಲಿನಲ್ಲಿ ಇಂಜಿನೀಯರಿಂಗ್ ಓದುತ್ತಿದ್ದ ದಿನಗಳು. ಖರ್ಚು ಜಾಸ್ತಿ. ಗೆಳತಿಯರ ನೋಡಿ ನನಗೂ ಹೊಸ ಬಟ್ಟೆ ಹಾಕಿಕೊಳ್ಳುವ  ಆಸೆ ಬೇರೆ ಜಾಸ್ತಿ. ಪ್ರತಿ ಸಲ ಊರಿಗೆ ಹೋಗಿದ್ದಾಗ ಅಮ್ಮನ ಸೀರೆ ಪೆಟ್ಟಿಗೆಯನ್ನು ತೆಗೆದು ನೋಡುತ್ತಿದ್ದೆ. ಪ್ರತಿ ಸಲ ಅವೇ ಸೀರೆಗಳು. ಮಾದುವೆ ಸಮಾರಂಭದ ದಿನಗಳಲ್ಲಿ ೧-೨ ಹೊಸ ಸೀರೆಗಳು ಅವರಿವರು ಗಿಫ್ಟ್ ಆಗಿ ಕೊಟ್ಟಿದ್ದು ಪೆಟ್ಟಿಗೆ ಸೇರುತ್ತಿದ್ದವು. ಅವುಗಳಲ್ಲಿ ಹಳೆಯದು  ಒಂದನ್ನು ಆಯ್ದು ಚೂಡಿದಾರ ಹೊಲಿಸಿಕೊಳ್ಳುತ್ತಿದ್ದೆ. ತುಂಬಾ ತೆಳು ಸೀರೆಯಾದರೆ ತಾತನ ಬಿಳಿ ಪಂಚೆ ಲೈನಿಂಗ್ ಆಗುತ್ತಿತ್ತು!  ಅಮ್ಮ ಎಷ್ಟೇ ಇಷ್ಟವಾದ ಸೀರೆಯಾದರೂ ನಾನು ಕೇಳಿದಾಗ "ಆ ಕಲರ್ ನಂಗೆ ಸರಿ ಹೋಗೋದಿಲ್ಲ, ನಿಂಗೆ ಚಂದ ಕಾಣೊತ್ತೆ" ಎನ್ನುತ್ತಿದ್ದರು.  ಹೀಗೆ ಕಡಿಮೆ ಖರ್ಚಿನಲ್ಲಿ ನನಗೆ ಬಟ್ಟೆಗಳು ಆಗುತ್ತಿದ್ದವು. ಹಳೆಯದೆಂದು ಆ ಚೂಡಿದಾರವನ್ನು ಬಿಟ್ಟಾಗ, ಅಮ್ಮ ಅದನ್ನು  ಕಟ್ ಮಾಡಿ ದಾರದ ತರಹ ಉಪಯೋಗಿಸುತ್ತಿದ್ದರು. "ನೈಲಾನ್ ಅಲ್ಲವೇ , ಹರಿಯೋದೇ ಇಲ್ಲ" ಎನ್ನುತ್ತಿದ್ದರು. ಬೇಲಿ ಕಟ್ಟುವುದರಿಂದ ಹಿಡಿದು ಹಪ್ಪಳದ ಕಟ್ಟು ಕಟ್ಟುವ ತನಕ ಉಪಯೋಗಿಸಬಹುದಿತ್ತು.  ಹೀಗೆ ಎಲ್ಲ ಪದಾರ್ಥಗಳ ಮರುಬಳಕೆ ಜಾಸ್ತಿ ನಮ್ಮ ಕಡೆ. ನಮ್ಮ ಅಮ್ಮ ಅಚ್ಚುಕಟ್ಟಾಗಿ ಸಂಸಾರ ಮಾಡುವುದರಲ್ಲಿ ಎತ್ತಿದ ಕೈ! ತುಂಬಾ ಜಾಣೆ ಕೂಡ. ಅಮ್ಮಂಗೆ ನಾವೆಲ್ಲಾ MTech ಅಮ್ಮ ಎಂದು ರೇಗಿಸುತ್ತಿದ್ದೆವು. ಹೀಗೆ ಹಲವು ನೆನಪುಗಳು ಸುತ್ತಿಕೊಂಡವು.

ಅಮ್ಮನ ನೋಡುವ ಬಯಕೆ ಜಾಸ್ತಿಯಾಗುತ್ತಿದೆ. ಯಾವಾಗ ಊರಿಗೆ ಹೋಗುತ್ತಿನೋ! ಅಮ್ಮ ಅಡಿಗೆ ಮಾಡುವಾಗಲೆಲ್ಲ ಅಡಿಗೆ ಕಟ್ಟೆಯ ಮೇಲೆ ಕೂತು ವಟ ವಟ ಮಾತಾಡಬೇಕೆನ್ನುವ ಆಸೆ. ಹಾಗೆ ಅಮ್ಮನ ತೊಡೆಯ ಮೇಲೆ ಮಲಗಿ ಕನ್ನಡ ಸೀರಿಯಲ್ ಒಂದು ದಿನದ್ದು ನೋಡಿದರೂ ವರ್ಷದ್ದೆಲ್ಲ ಕಥೆ ಕೇಳಬಹುದು. ಇದೇ ತರಹ ಎಷ್ಟೋ ನನಗಿಷ್ಟವಾದದ್ದನ್ನು ಮಾಡಬಹುದು. ಸೋಮಾರಿ ಕಟ್ಟೆ ಯನ್ನಂತೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.  ಅಮಾವಾಸ್ಯೆ ರಾತ್ರಿಯ ಸ್ಟಾರ್ ವಾಚಿಂಗ್ ಮತ್ತು ಹುಣ್ಣಿಮೆ ರಾತ್ರಿಯ ಮೂನ್ ವಾಚಿಂಗ್ ಎರಡನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹಲಸಿನ ಕಾಯಿಯ ವಿಷಯಕ್ಕೆ ಬಂದರಂತೂ... ಊರಿನಲ್ಲಿರುವ ವೆರೈಟಿ ಎಲ್ಲೂ ಇಲ್ಲ. ಹಲಸಿನ ಕಾಯಿ ಹಪ್ಪಳ, ಹಲಸಿನಕಾಯಿ ಚಿಪ್ಸ, ಕೆಂಡದಲ್ಲಿ ಸುಟ್ಟ ಹಲಸಿನ ಬೇಳೆ.... ಹಲಸಿನ ಹಣ್ಣಿನ ಕಡುಬು, ದೋಸೆ.  ಹಲಸಿನ ಕಾಯಿ ಪಲ್ಯ, ಹುಳಿ . ಇಷ್ಟೇ ಏಕೆ ಹಲಸಿನ ಬೇಳೆಯ ಸಿಪ್ಪೆಯ ಪಲ್ಯ! ಮರದಿಂದ ಆಗ ತಾನೇ ಇಳಿಸಿದ ಹಲಸಿನ ಹಣ್ಣನ್ನು ಸುತ್ತಲೂ ಕೂತು ತಿನ್ನುವ ಮಜವೇ ಬೇರೆ! ಹೀಗೆ ದಿನವೆಲ್ಲ ಅಮ್ಮನ ಮತ್ತು ಊರಿನ ನೆನಪು. ಈ ಅಮ್ಮಂದಿರೇ ಹಾಗೆ ತಾವು ಕಳಿಸಿಕೊಟ್ಟ ಚಿಕ್ಕ ಚಿಕ್ಕ ಪದಾರ್ಥದಲ್ಲಿ ಬೆಟ್ಟದಷ್ಟು ಪ್ರೀತಿ ತುಂಬಿರುತ್ತಾರೆ ಅದಕ್ಕೆ ಹೀಗೆ "ಹಲಸಿನ ಕಾಯಿ ಹಪ್ಪಳ" ದಿನವೆಲ್ಲ ಕಾಡುತ್ತದೆ!

Monday, April 28, 2014

ಪ್ಯಾನ್ ಕೇಕ್ aka ಅಮೇರಿಕ ದೋಸೆ !

                                                                 Photo: iHop.com

ಅಮೆರಿಕಾಕ್ಕೆ ಬಂದು ಇಲ್ಲಿಯವರ food ತಿನ್ನಲಿಲ್ಲವಲ್ಲ ಅಂದುಕೊಂಡಿದ್ವಿ. ಯಾರೋ ಹೇಳಿದ್ರು ಇಲ್ಲಿ ಪ್ಯಾನ್ ಕೇಕ್ ತುಂಬಾ ಪ್ರಸಿದ್ಧ, ಇದು ಇಲ್ಲಿಯವರ breakfast item ಎಂದು. ಏನೋ ನಮ್ಮ ಮಸಾಲಾ ದೋಸೆ, ಸೆಟ್ ದೋಸೆ, ರವಾ ದೋಸೆ..... ಇತ್ಯಾದಿ ಇತ್ಯಾದಿ ನೆನಪಿಸಿಕೊಂಡು.. ಪ್ಯಾನ್ ಕೇಕ್ aka ಅಮೆರಿಕಾದ ದೋಸೆ ತಿನ್ನಲು ಬೆಳಿಗ್ಗೆ ತಿಂಡಿಯ ಹೊತ್ತು ಅಲ್ಲ ಮಧ್ಯಾಹ್ನ ಊಟದ ಹೊತ್ತು ಅಲ್ಲ ದ ಹೊತ್ತಿನಲ್ಲಿ brunch ಮಾಡಲು, ಕನ್ನಡದಲ್ಲಿ ಹೇಳಬೇಕೆಂದರೆ "ತೂಟ" ಮಾಡಲು ಹೊರಟೆವು.

ತುಂಬಾ ರಶ್ ಇತ್ತು, ನಮಗೆ ಖುಷಿ, ಓಹೋ ತುಂಬಾ ಚೆನ್ನಾಗಿರಬೇಕು ಅನ್ನಿಸಿತು. ವೈಟ್ ಮಾಡಿ ಒಳಗೆ ಹೋಗಿ ಕೂತಿದ್ದಕ್ಕೆ ಇನ್ನೂ ಖುಷಿ.. MTR ನೆನಪಾಯಿತು. ನೆಟ್ ನೋಡಿ ಮೊದಲೇ ಏನು order ಮಾಡಬೇಕೆಂದು ತೀರ್ಮಾನಿಸಿಕೊಂಡಿದ್ವಿ, ಅದಕ್ಕೆ ಗೊಂದಲವಿಲ್ಲದೆ, confident ಆಗಿ ಗೊತ್ತಿರೋವರ ತರಹ order ಮಾಡಿದ್ದಾಯಿತು. ಸೆಟ್ ದೋಸೆಯ ತರಹದ್ದು ೨ ಪ್ಲೇಟ್ ಬಂತು. ಇಲ್ಲಿಯವರ ತರಹ ನಾವುನೂ ಚಾಕು, ಫೋರ್ಕು, ಚಮಚ ಎಲ್ಲ ಬಳಸಿಕೊಂಡು ನಾಲ್ಕು ತುತ್ತು ತಿಂದಿದ್ದೆ ತಡ ಸಾಕೋ ಸಾಕಾಯ್ತು. ಯಾಕೋ ಅಡಿಗಾಸ್ ನ ನೆನಪು ಬಹಳ ಕಾಡಿತು... ಕೈನಲ್ಲಿ ದೋಸೆ ಚೂರನ್ನು ಚಟ್ನಿಯಲ್ಲಿ, ಸಾಂಬಾರ ನಲ್ಲಿ ಅದ್ದಿ ಅದ್ದಿ ತಿನ್ನುತ್ತಿದ್ದ ಹಾಗೆ..  ! ಇವರ ಪ್ಯಾನ್ ಕೇಕ್ ತುಂಬಾ ಸಿಹಿ ಜಾಸ್ತಿ, ಅದಕ್ಕೆ ಎಷ್ಟು baking powder ಹಾಕಿದ್ದಾರೆ ಎಂದರೆ ವಾಂತಿ ಬರುವಷ್ಟು ! ಅದರ ಮೇಲೊಂದಿಷ್ಟು cheese, sause, fruits ಎಲ್ಲಾ ಸುರಿದಿದ್ದಾರೆ.  ಒಂದೊಂದು ಪ್ಲೇಟ್ ಗೆ ತಲಾ ೫೦೦ ತೆತ್ತು ಮನೆಗೆ ಬಂದ್ವಿ. ಬಂದು ಜೀರಿಗೆ ತಿಂದ್ವಿ..  ವಾಂತಿ ಯಾಗದಂತೆ precaution..!

ಅನ್ನಿಸಿದ್ದು...
ನಮ್ಮ ದೋಸೆ ಯನ್ನು ನಾವು ನೈಸರ್ಗಿಕವಾದ ರೀತಿಯಲ್ಲಿ ಹುಳಿ ಬರಿಸಿ ಮಾಡುತ್ತೇವೆ.. ರುಚಿಕರ ಮತ್ತು ಆರೋಗ್ಯಕರ ! ಇಲ್ಲಿನ ಜನ, baking powder, gluten ಅದು ಇದು ಮಣ್ಣು ಮಶಿ ಎಂದು ಕೃತಕವಾಗಿ ತಯಾರಿಸುತ್ತಾರೆ. ಅದಕ್ಕೆ ಇಲ್ಲಿನ ಜನ obesity ಯಿಂದ ಬಳಲುತ್ತಿದ್ದಾರೆ. ಇಲ್ಲಿನ ಜನ ಪ್ಯಾಕಡ್ ಫುಡ್ ಬಹಳ ತಿನ್ನುತ್ತಾರೆ. ನನಗೆ ಕೆಲವರು ಕೇಳಿದ್ದರು ಇಲ್ಲಿ.. " ನೀವು ದಿನಾಲೂ ಅಡಿಗೆ ಮಾಡುತ್ತೀರಾ ಅಥವಾ ವಾರಕ್ಕೊಮ್ಮೆಯಾ ? " ಎಂದು.. ಇದೂ ಒಂದು ಪ್ರಶ್ನೆಯಾ ಎಂದುಕೊಂಡಿದ್ದೆ! ನಾನು ಆಫೀಸ್  ಕೆಲಸ ಮಾಡಿಕೊಂಡು ದಿನಕ್ಕೆ ೨ ಸಲ ಅಡಿಗೆ ಮಾಡುತ್ತೇನೆ, fridge ನಲ್ಲಿ ಅಡಿಗೆ ಇಡುವುದಿಲ್ಲ ಎಂದರೆ ಆಶ್ಚರ್ಯ ಇವರಿಗೆ. ಇವೆಲ್ಲ ನಮ್ಮ ಸಂಸ್ಕೃತಿಯಿಂದ ಬಂದಿದ್ದು ನಮಗೆ...ಅಪ್ಪ ಅಮ್ಮ ಕಲಿಸಿದ್ದು.. ನಮ್ಮದು ಪುರಾತನ ಸಂಸ್ಕೃತಿ, ಬಹಳ ಭದ್ರವಾದುದ್ದು... ಪಾಶಿಮಾತ್ಯರ ಪ್ರಭಾವಕ್ಕೆ ನಾವು ಒಳಗಾದರೂ ನಮ್ಮ ಸಂಸ್ಕೃತಿಯ ಬೇರು ಇರಬೇಕು, ಇವರಿಂದಲೂ ಕಲಿಯುವುದು ತುಂಬಾ ಇದೆ ಆದರೆ ಅವು ಬರಿಯ ಚಿಗುರಾಗಿರಲಿ...
"ಹಳೆ ಬೇರು ಹೊಸ ಚಿಗುರು ಜೀವನ ಸುಂದರ"

Wednesday, February 13, 2013

ಫೆಬ್ರುವರಿ ೧೩

ಪ್ರೀತಿ ಪಾತ್ರರಾದವರನ್ನು ಖುಷಿ ಪಡಿಸಿದಾಗ ಸಿಗುವ ತೃಪ್ತಿ ಅತ್ಯಮೂಲ್ಯ . ಹಾಗೆ ನನ್ನ ಜೀವನದ ಅತಿ ಖುಷಿಯ ದಿನಗಳಲ್ಲೊಂದು ಫೆಬ್ರುವರಿ ೧೩!ಬೆಂಗಳೂರಿನಿಂದ ಮಂಗಳೂರಿನವರೆಗಿನ ೧ ಘಂಟೆಯ ಪ್ರಯಾಣ ನಿಜಕ್ಕೂ ಮರೆಯಲಾಗದ್ದು ! Unforgettable! Amaizing ! Beautiful ! ಯಾವ ಶಬ್ದಕ್ಕೂ ನಿಲುಕದ್ದು !
ಇದಕ್ಕೆ ಕಾರಣ ವಿಮಾನದಿಂದ ಕಾಣುವ ಸೂರ್ಯ ಹುಟ್ಟುವುದಕ್ಕೆ ಮುಂಚಿನ ನೀಲಿಯಾಕಾಶವನ್ನು ನೋಡಿದ್ದಕ್ಕಲ್ಲ! ಆಗ ತಾನೇ ಉದಯಿಸುತ್ತಿರುವ ಸೂರ್ಯನನ್ನು ಹಾಗೂ ಸೂರ್ಯೊದಯ ದ ಹೊತ್ತಿಗೆ  ಕೆಂಪು ಕೆಂಪಾದ ಆಕಾಶವನ್ನು ನೋಡಿದ್ದಕ್ಕಲ್ಲ ! ಮಂಗಳೂರು, ಉಡುಪಿ, ಮುರುಡೇಶ್ವರದ ಪ್ರವಾಸದ ಖುಷಿಗಂತೂ ಖಂಡಿತ ಅಲ್ಲ ! ಇಷ್ಟಕ್ಕೂ ಕಾರಣ ಪಕ್ಕದಲ್ಲಿ ಮಗುವಿನಂತೆ ನಗುತ್ತ ಕುಳಿತು, ವಿಮಾನದ ಒಳಗೂ ಹೊರಗೂ ಸತತವಾಗಿ ನೋಡಿ enjoy ಮಾಡಿದ ಅಜ್ಜ! ಹಾಗೂ ಅವನ ಕುತೂಹಲಕಾರಿ ಪ್ರಶ್ನೆಗಳು! ಅಜ್ಜನ ವಿಮಾನವೇರುವ ಚಿಕ್ಕ ಆಸೆಯನ್ನು ನೇರವೇರಿಸಿದ ಹೆಮ್ಮೆಗೆ ಆದ ಖುಷಿ ಅಷ್ಟಿಷ್ಟಲ್ಲ. ಫೆಬ್ರುವರಿ ೧೪ ಮರೆತರೂ ಫೆಬ್ರುವರಿ ೧೩ ಮರೆಯದ ಹಾಗೆ ಮಾಡಿದ್ದಕ್ಕೆ Thanks ;-)
Thank you so much Ajja for the unforgettable journey!





 

Thursday, February 7, 2013

ಗೆಳತೀ ....


Photo by: Kavita

 

 

                                                              ವ್ಯಕ್ತ ಪಡಿಸದ ಸ್ನೇಹ,

 

                                                             ಸುಪ್ತ ಪ್ರೀತಿಯ ಭಾವ.

 

                                                        ಆಡಿದಷ್ಟು ಮುಗಿಯದ ಮಾತು,

 

                                                      ಕೈ ಕೈ ಹಿಡಿದು ನಡೆದ ಸವಿ ನೆನಪು.

 

                                                           ಯಾವುದೂ ಮಾಸದಿರಲಿ,

 

                                                            ನಗುವು ಹೂವಿನಂತಿರಲಿ.

 

                                                    ಗೆಳತೀ , ನೀ  ಗೆಳತಿ ಯಾಗಿರಲೀ ಸದಾ! 

 

Tuesday, February 5, 2013

ವಿನೂತನ ಹೊಸವರ್ಷದ ಆಚರಣೆ !

ಹಳ್ಳಿ ಬದುಕಿನ ರೂಢಿಯ ನನಗೆ ಈ ಹೊಸ ವರ್ಷದ ಆಚರಣೆ ಹೊಸತು.೨೦೧೩ ನ್ನು  ಬರಮಾಡಿಕೊಳ್ಳುವ ಸಂದರ್ಭ ದಲ್ಲಿ ನಾನು ತೈವಾನ್ ನಲ್ಲಿದ್ದಿದ್ದರಿಂದ ಇಲ್ಲಿಯವರ ಹೊಸ ವರ್ಷದ ಆಚರಣೆಯನ್ನು ನೋಡುವ ಅವಕಾಶ ಸಿಕ್ಕಿತು.
ತೈವಾನ್ ನಲ್ಲಿರುವ Taipei 101,  2004 ರಿಂದ 2012 ರವೆರೆಗೆ ಪ್ರಪಂಚದ ಅತಿ ಎತ್ತರದ ಕಟ್ಟಡ ವಾಗಿತ್ತು. ಈಗ ಎರಡನೆಯದು. ಅಲ್ಲಿ ಪ್ರತಿ ವರ್ಷ ಪಟಾಕಿ ಸಿಡಿಸುವುದರ ಮೂಲಕ ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಕಟ್ಟಡದ ಸುತ್ತಲೂ ೧  ಲಕ್ಷಕ್ಕಿಂತಲೂ ಹೆಚ್ಚು ಜನ ಮೆರೆದರೂ ಯಾವುದೇ ಗಲಾಟೆಯಿಲ್ಲ. ಎಲ್ಲೆಲ್ಲಿ ಜಾಗವಿದೆಯೋ ಅಲ್ಲೆಲ್ಲಾ ಕಡೆ ಅವರವರದೇ ಆದ ಗುಂಪಿನಲ್ಲಿ ಬಂದು ಕೂತು, ಆಟವಾಡುತ್ತಲೋ, ತಿನ್ನುತ್ತಲೋ 12 ಘಂಟೆಯವರೆಗೆ ಟೈಮ್ ಪಾಸ್ ಮಾಡಿ, ಪಟಾಕಿ ಸಿಡಿಯುವುದನ್ನು ನೋಡಿಕೊಂಡು ಶಿಸ್ತಿನಿಂದ ಮನೆಗೆ ಹೊರಟು ಹೋದರು.ಆಲ್ಲಿಯ ಸರ್ಕಾರ ಅಷ್ಟೊಂದು ಜನರಿಗೆ ಮಾಡಿದ ವ್ಯವಸ್ಥೆ  ಹಾಗೂ ಅಷ್ಟೇ ಶಿಸ್ತಿನಿಂದ ಪಾಲಿಸಿದ ಜನರನ್ನು ನೋಡಿ ದಂಗಾದೆ ! ಇಲ್ಲಿಯ ಜನರ ಬಗ್ಗೆ ಇನ್ನೊಮ್ಮೆ ವಿವರವಾಗಿ ಹೇಳಲೇ ಬೇಕು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ "ಈ ದೇಶದ ಜನ ತುಂಬಾ ಒಳ್ಳೆಯವರು, ಮಾನವೀಯತೆಯನ್ನು ಹೊಂದಿದವರು ಹಾಗೂ ಖುಷಿಯಿಂದ ಬದುಕಲು ಅರಿತವರು"



 










ನಾವು ವೀಡಿಯೊ ಮಾಡಿಕೊಂಡು ಸ್ನೇಹಿತರೊಬ್ಬರು ಫೋಟೊ ತೆಗೆದುಕೊಂಡಿದ್ದರಿಂದ ಫೋಟೊ ಕ್ರೆಡಿಟ್ಸ್ ಎಲ್ಲಾ ಅವರಿಗೆ..
ಎಲ್ಲಾ ಫೋಟೊದಲ್ಲಿ ಬಲಭಾಗದಲ್ಲಿರುವ ಬಿಲ್ಡಿಂಗ್ ಅಡ್ಡ ಬರದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು..ಒಳ್ಳೆಯ ಜಾಗವನ್ನು ತೈವಾನ್ ನವರು ಮೊದಲೇ ಆರಿಸಿಕೊಂಡು ಕುಳಿತುಬಿಟ್ಟಿದ್ದರು ! ಸ್ಪೇನ್ ದೇಶದಿಂದ ಇಂಪೋರ್ಟ್ ಮಾಡಿಕೊಂಡ ಪಟಾಕಿಯನ್ನು ಜಿಪಿಎಸ್ ಟೆಕ್ನಾಲಜಿ ಯ ಮೂಲಕ ಸಿಡಿಸಿದರಂತೆ! 3 ಘಂಟೆ ಮುಂಚಿತವಾಗಿ ಹೋಗಿ 3 ನಿಮಿಷದವರೆಗೆ ಪಟಾಕಿ ಹೊಡೆಯುವುದನ್ನು ನೋಡಿಕೊಂಡು ಮತ್ತೆ 3 ಘಂಟೆ ಕ್ಯೂ ನಲ್ಲಿ ನಿಂತು ಮನೆಗೆ ಬಂದದ್ದಾಯಿತು!!
 

Wednesday, September 26, 2012

ಚಿಗುರು




                                        ನಿಲ್ಲದೆ ಸುರಿಯುವ
                                      ಜಡಿ ಮಳೆಯ ಅಬ್ಬರಕೆ 
                                           ಹೊಸ ಚಿಗುರು 
                                          ಹಸಿರ ಸೊಬಗು ;

                                          ಬಿಡದೆ ಕಾಡುವ 
                                     ಸಿಹಿ ನೆನಪ ಚಿಲುಮೆಗೆ  
                                            ಹೊಸ ಆಸೆ
                                           ಹೊಸ ಕನಸು.





Thursday, August 30, 2012

ಭಾವ ಪರಿಧಿ

ನನಗೆ ತುಂಬಾ ಹಿಡಿಸಿದ ಮತ್ತೆ ಮತ್ತೆ ಓದಬೇಕೆನಿಸುವ ಕವನ .......


Tuesday, November 8, 2011

ಅರಳು ಕನಸೇ...


ಮು೦ಜಾನೆಯ ಅರೆನಿದ್ದೆಯ
ಸಿಹಿಕನಸು ನೀನು,
 
ಮುಚ್ಚಿದ ಕ೦ಗಳಲಿ
ಕಾಣುವ ಚಿತ್ರ ನೀನು,
 
ನಿನ್ನ ನೆನಪಲ್ಲಿ ಮೂಡುವ
ಕಿರುನಗೆಯಲ್ಲಿ ಅರಳಬೇಕು ನಾನು!

 
                                                                                              


Sunday, September 18, 2011

ಶರಧಿ





ಸಾಗಿದಷ್ಟು ದೂರ, 

ಇಳಿದಷ್ಟು ಆಳ,

ಉದ್ದ, ಅಗಲ,ಆಳ ತಿಳಿಯದ

ಪ್ರೀತಿಯೆನ್ನುವುದು ಶರಧಿ.

ಇದರಲ್ಲಿ ಈಜಿ ಗೆದ್ದವರೆಷ್ಟೊ?

ಮುಳುಗಿ ಸತ್ತವರೆಷ್ಟೊ?




 ಯಾಕೋ ’ಶರಧಿ’ ತು೦ಬಾ ಇಷ್ಟವಾಗುತ್ತಿದೆ..ಅದನ್ನು ’ಪ್ರೀತಿ’ ಗೆ ಹೋಲಿಸಿದಾಗ ಇನ್ನೂ ಖುಷಿಯಾಗುತ್ತಿದೆ..
ಹಾಗೆ ಮನಸ್ಸಿಗೆ ಬ೦ದ ನಾಲ್ಕು ಸಾಲುಗಳನ್ನು ಮುರುಡೇಶ್ವರ ಬೀಚ್ ನ ಫೋಟೊ ದ ಜೊತೆ ನಿಮ್ಮೊಡನೆ ಹ೦ಚಿಕೊಳ್ಳುತ್ತಿದ್ದೇನೆ.
     
      

Sunday, September 11, 2011

ಚಿತ್ರ ಕವನ ಸ್ಪರ್ಧೆ-114

"Sweet Memory" - ಇದು ಹುಡುಕಿಕೊ೦ಡು ಹೋದರೆ ಸಿಗುವ೦ಥದ್ದಲ್ಲ..ತನ್ನಷ್ಟಕ್ಕೆ ಹುಟ್ಟುಕೊಳ್ಳುವ೦ಥದ್ದು.
ಅದರಲ್ಲೂ ಬಾಲ್ಯದ ಕೆಲವು ನೆನಪುಗಳು ಶಾಶ್ವತವಾಗಿ "Sweet Memory"ಯಾಗಿ ಉಳಿಯುತ್ತವೆ.
ಅದು ಒ೦ದು ಬೊ೦ಬೆಯೊ,ಅಜ್ಜ ಅಜ್ಜಿಯ ಜೊತೆ ಕಳೆದ ಕ್ಷಣಗಳೊ,ಅವರ ಜೊತೆ ತೆಗೆಸಿಕೊ೦ಡ ಫೋಟೊಗಳೊ
ಅಥವಾ ಇನ್ಯಾವುದೋ ಘಟನೆಯೋ ಆಗಿರಬಹುದು.ಬೇರೆಯವರಿಗೆ ತು೦ಬಾ ಸಿಲ್ಲಿ ಯಾಗಿ ಕ೦ಡರೂ ನಮ್ಮ ಪಾಲಿಗೆ
ನೆನೆದಾಗ ನಗು ಮೂಡಿಸುವ "Sweet Memory"ಯಾಗಿರುತ್ತದೆ:) 
ಚಿತ್ರ ಕವನ ಸ್ಪರ್ಧೆಯ ಈ ಫೋಟೊ ಕೂಡ ಬಾಲ್ಯದ ಹಲವು ಸಿಹಿ ನೆನಪು ಗಳಲ್ಲಿ ಒ೦ದು.



ಚಿಕ್ಕವಳಿದ್ದಾಗ ಮಾವ ತೆಗೆದ ನನ್ನ ಫೋಟೊ ಒ೦ದು ತುಷಾರದಲ್ಲಿ ಚಿತ್ರ ಕವನ ಸ್ಪರ್ಧೆ ವಿಭಾಗದಲ್ಲಿ ಆಯ್ಕೆಯಾಗಿ ಬ೦ದಿತ್ತು.
ಅದಕ್ಕಾಗಿ ನ೦ಗೊ೦ದು ಪೆನ್ ಕೂಡ ಕೊಡಿಸಿದ್ದರು:) ಆ ಚಿತ್ರ ಮತ್ತು ಅದಕ್ಕೆ ಯಾರೋ ಬರೆದ ವಿಜೇತ ಕವನದ ಸಮೇತ ಜೋಪಾನ ಮಾಡಿದ್ದೆ.ತುಷಾರದಲ್ಲಿ ನಡೆಯುತ್ತಿದ್ದ 115 ನೇ ಸ್ಪರ್ಧೆಯಿ೦ದ ಹಿಡಿದು ಹಲವು ಸ್ಪರ್ಧೆಗಳಿಗೆ ನಾನೂ ಪ್ರಯತ್ನಿಸಿ ವಿಫಲನಾಗಿದ್ದೆ. ನಾಲ್ಕನೆ ಕ್ಲಾಸ್ ನಲ್ಲಿದ್ದ ನ೦ಗೆ ಬರೀ "ಬೆಕ್ಕು ಮಿಯಾವ್ ಮಿಯಾವ್; ನಾಯಿ ಬೌ ಬೌ;ಕಾಗೆ ಕಾ ಕಾ; ಹಸು ಅ೦ಬಾ..." ಅನ್ನೋ ಕವನಗಳನ್ನು ಮಾತ್ರ ಬರೆಯಲು ಬರುತ್ತಿದ್ದವು.ಇತ್ತೀಚೆಗೆ ಆ ಫೋಟೊ ಮಾತ್ರ ಸಿಕ್ಕಾಗ ಅದಕ್ಕೊ೦ದು ಕವನ ಬರೆದು ಬ್ಲಾಗ್ ಗೆ ಹಾಕೋಣ ಎ೦ದುಕೊ೦ಡೆ."ಚಿಗುರೀತೆ ಕನಸು..??" ಎ೦ದು ಹೆಸರಿಟ್ಟೆ. ಆದರೆ ಅಕ್ಷರಗಳು ಸಾಥ ನೀಡದೇ ಕೈ ಕೊಟ್ಟಿವೆ. ಇ೦ಥಹ ಸಮಯದಲ್ಲಿ ಬರೆದರೆ ನಾಲ್ಕನೇ ಕ್ಲಾಸ್ ನ ಕವನದ ಹಾಗೇ ಇರುತ್ತವೇನೋ ಅನ್ನೋ ಭಯ!

ಈ ಚಿತ್ರಕ್ಕೆ ಕವನ ಬೇಕೆ ಬೇಕೆ೦ಬ ಆಸೆ! ತಕ್ಷಣ ನೆನಪಾಗಿದ್ದು ನೀವು! ನನ್ನ ನೆಚ್ಚಿನ ಬ್ಲಾಗ್ ಸ್ನೇಹಿತರು..
ಚ೦ದದ ಕವನಗಳಿಗಾಗಿ ಕಾಯುತ್ತಿರುತ್ತೇನೆ.ಕವನ ಬರೆಯಲು ಬರದವರು ಚಿತ್ರಕ್ಕೆ ತಕ್ಕಾದ ಅನಿಸಿಕೆಯನ್ನು ಕಳಿಸಬಹುದು.
ಕವನಗಳನ್ನು ಸ್ವೀಕರಿಸುವ ಅ೦ತಿಮ ದಿನಾ೦ಕವನ್ನು 6-1-1993 ಯಿ೦ದ 18-9-2011 ಕ್ಕೆ ಬದಲಾಯಿಸಲಾಗಿದೆ.


Monday, August 15, 2011

’ನವಿಲು ಗರಿ’ ಗೆ ಒ೦ದು ವರುಷ..

                                              
ಬ್ಲಾಗ್ ಪ್ರಾರ೦ಭ ಮಾಡಿ ಒ೦ದು ವರ್ಷವಾಯಿತು.’ನವಿಲು ಗರಿ’ ನನ್ನ ಮನಸ್ಸಿಗೆ ತು೦ಬಾ ತು೦ಬಾ ಹತ್ತಿರವಾಗಿದೆ.
ಎಷ್ಟೆಷ್ಟೊ ಖುಷಿಯ ಕ್ಷಣವನ್ನು ನೀಡಿದೆ. ಓದುವ ಬರೆಯುವ ಹವ್ಯಾಸವನ್ನು ಹಚ್ಚಿ ಹಾಕಿದೆ.ಎಷ್ಟೇ ಕೆಲಸದ ಒತ್ತಡವಿರಲಿ ಒ೦ದು ಕಾಮೆ೦ಟ್ ಬರಲಿ / ಒಬ್ಬ ಫೊಲೊವರ್ ಹೆಚ್ಚಾಗಲಿ ಗೊತ್ತಿಲ್ಲದೇ ಮುಖದಲ್ಲೊ೦ದು ನಗು ಸುಳಿದು ಹೋಗುವುದು.. ಬರೆದಿದ್ದು ಕಡಿಮೆಯೇ ಆದರೂ ಪ್ರೀತಿಯಿ೦ದ ಓದಿ ಪ್ರೋತ್ಸಾಹ ಕೊಡುತ್ತಿರುವ ಎಲ್ಲಾ ಬ್ಲಾಗ್ ಮಿತ್ರರ ಸಹಕಾರಕ್ಕೆ ನಾನು ಸದಾ ಋಣಿ.. ಅದಕ್ಕಾಗಿ ಎಲ್ಲರಿಗೂ
                                                                ***  ಧನ್ಯವಾದಗಳು ***


                                                    

Wednesday, August 3, 2011

ಹೆಬ್ಬಾಳ್ ಲೇಕ್ ಫೋಟೊವಾಕ್

 
 
 














ಫೋಟೊ ತೆಗೆಯುವುದರಲ್ಲಿ ನಾನಿನ್ನು ಒ೦ದನೇ ತರಗತಿ, ಅ೦ದರೆ ಇನ್ನು ಆಟೊ ಮೋಡ್ ನಲ್ಲೆ ಇದೀನಿ :) ಹೆಬ್ಬಾಳ್ ಲೇಕ್ ಫೋಟೊವಾಕ್ ಫೋಟೊಗಳನ್ನು ನೋಡಿ ಹೇಗಿದೆ ಹೇಳಿ....

ನಿಮಗೆ ಫೋಟೊಗ್ರಫಿ ಯಲ್ಲಿ ಆಸಕ್ತಿ ಇದ್ದರೆ, ಸಮಾನ ಮನಸ್ಕರ ಜೊತೆಗೂಡಿ ಕಲಿಯಬಹುದಾದ ಅವಕಾಶಕ್ಕಾಗಿ ಹಾಗೂ ಸು೦ದರ ಮು೦ಜಾನೆಯನ್ನು ಸು೦ದರವಾಗಿ ಕಳೆದ ತೃಪ್ತಿಗಾಗಿ ಫೋಟೊವಾಕ್ ಗ್ರೂಫ್ ನ್ನು ಸೇರಿಕೊಳ್ಳಿ..

ಹೆಚ್ಚಿನ ವಿವರಕ್ಕಾಗಿ.. http://bangalore.photowalk.in/