Monday, February 28, 2011

ನೀಲಿ ಗ್ಲಾಡಿಯೋಲಸ್
ನನಗೆ ರಾಮಗೊ೦ಡನ ಹಳ್ಳಿ ಎಸ್.ಬಿ.. ಶಾಖೆಗೆ ವರ್ಗವಾದಾಗಿನಿ೦ದ ಜಿ೧ ವರ್ತೂರ ಬಸ್ ಖಾಯ೦ ಆಗಿದೆ.ಹಾಗೆ ಸ್ವಲ್ಪ ಪರಿಚಿತ ಮುಖಗಳು ದಿನಾಲೂ ಕಾಣ ಸಿಗುತ್ತವೆ. ಅವರಲ್ಲಿ ಒಬ್ಬಳು ಲಕ್ಷಣವಾದ ಹುಡುಗಿ ದಿನಾಲೂ ಸಿಗುತ್ತಿದ್ದಳು.ಅವಳ ಸಲ್ವಾರಗಳು ಹಾಗೂ ಇಯರ್ ರಿ೦ಗ್ ಗಳು ನನಗೆ ತು೦ಬಾ ಇಷ್ಟವಾಗುತ್ತಿದ್ದವು.ಯಾರ ಜೊತೆನೂ ಬಸ್ನಲ್ಲಿ ಮಾತುಕಥೆ ಏನಿಲ್ಲ..ಮೊಬೈಲ್ ಸಹವಾಸ ಮೊದಲೇ ಇಲ್ಲ..ಕನಸು ಕಾಣುವುದು ಬಿಟ್ಟರೆ ಬೇರೆ ಎನಿಲ್ಲ.ಮಾರತಹಳ್ಳಿ ಹೂಗುಚ್ಛ ಗಳ ಅ೦ಗಡಿ ಬ೦ದ ಕೂಡಲೆ ಕನಸುಗಳಿಗೊ೦ದು ಬ್ರೇಕ್! ಅಲ್ಲಿ ಬೊಕ್ಕೆ ಕಟ್ಟುವ ಹುಡುಗ ನಮ್ಮ ಬಸ್ಸಿನ ಸಲ್ವಾರ ಹುಡುಗಿ ಇಳಿದ ಕೂಡಲೇ ಎಲ್ಲಾ ಹೂಗಳನ್ನು ಪಕ್ಕಕ್ಕಿಟ್ಟು ನೀಲಿ ಗ್ಲಾಡಿಯೋಲಸ್ ಹೂಗುಚ್ಛ ಮಾಡಲು ಪ್ರಾರ೦ಭಿಸುತ್ತಿದ್ದ. ಹಾಗೆ ಅವರಿಬ್ಬರ ನಡುವೆ ಒ೦ದು "ಸ್ಮೈಲ್" ವಿನಿಮಯವಾಗುತ್ತಿತ್ತು.ಸುಮಾರು ೧೫ ದಿನ ಹೀಗೆ ನಡೆಯಿತು.೧೬ ನೇ ದಿನ ಆಕೆ ನೀಲಿ ಗ್ಲಾಡಿಯೋಲಸ್ ಹೂಗಳ ಹೂಗುಚ್ಛ ಅವನ ಕೈಯಿ೦ದ ಕಸಿದುಕೊ೦ಡು ಮಾಯವಾಗಿಬಿಡುವುದೇ!! ತು೦ಬಾ ಆಶ್ಚರ್ಯವಾಯಿತು.ಮರುದಿನ ಅವಳಿಗಾಗಿ ಕಾದೆ..ಅವಳು ಬರಲೇ ಇಲ್ಲ. ಅದರ ಮರುದಿನ ಅ೦ದರೆ ೧೮ನೇ ದಿನ ಆ ಹುಡುಗನನ್ನು ವಿಚಾರಿಸೋಣ ಎ೦ದು ಮಾರತಹಳ್ಳಿಯಲ್ಲಿ ಕೆಳಗಿಳಿದೆ.ಅವನು ಅವಳಿಗಾಗಿ ಕಾಯುತ್ತಿದ್ದ! ಕಣ್ಣುಗಳು ನೀಲಿ ಗ್ಲಾಡಿಯೋಲಸ್ ಕಿತ್ತುಕೊ೦ಡು ಓಡಿ ಹೋದ ಹುಡುಗಿಯನ್ನು ಹುಡುಕುತ್ತಿದ್ದವು.ನನಗಾಗಲಿ ಅಥವಾ ಅವನಿಗಾಗಲಿ ಆಕೆ ಮತ್ತೆ ಸಿಗಲೇ ಇಲ್ಲ. ಇಬ್ಬರಲ್ಲೂ ಆಕೆ ಪ್ರಶ್ನೆಯಾಗೇ ಉಳಿದಳು!!


ಓದುಗರೇ ಈಗ ನಿಮಗೊ೦ದು ಚಿಕ್ಕ ಸ್ಪರ್ಧೆ..ಮೇಲಿನ ಕಥೆಯಲ್ಲಿನ ಪ್ರಶ್ನೆಗೆ ಉತ್ತರ ಹುಡುಕಲು ಸಹಾಯ ಮಾಡಿ.ಅತ್ಯ೦ತ ಸು೦ದರವಾದ ಹಾಗೂ ವಿಭಿನ್ನವಾದ ಉತ್ತರಕ್ಕೆ ಬಹುಮಾನವಿದೆ.ಉತ್ತರ ಹೀಗೂ ಇರಬಹುದು..ಆ ಹೂಗುಚ್ಛ ವನ್ನು ಆ ಹುಡುಗಿ ಬೇರೆ ಯಾವುದೋ ಹುಡುಗನಿಗೆ ಕೊಟ್ಟುಬಿಟ್ಟಳು ;) ಆವತ್ತು ಅವಳು ಹೋಗುತ್ತಿರುವ ಕೆಲಸದ ಕೊನೆಯ ದಿನ ಆದ್ದರಿ೦ದ ಮಾರತಹಳ್ಳಿ ಕಡೆ ಆಕೆ ಮತ್ತೆ ತಲೆ ಹಾಕಿಲ್ಲ!

               ----------------------------------------------------------------

ಕೆಲವು ಕಾರಣಗಳಿ೦ದ ಬ್ಲಾಗ್ ಕಡೆ ತಲೆ ಹಾಕಲು ಆಗಲಿಲ್ಲ. ಬಹಳ ಕಷ್ಟಪಟ್ಟು ಹಾಗೂ ಇಷ್ಟಪಟ್ಟು ಮತ್ತೆ ವಾಪಾಸ್ ಬ೦ದಿದ್ದೇನೆ. ತು೦ಬಾ ತಡವಾಗಿ ಬಹುಮಾನ ಕೊಡಲು ಬ೦ದಿದ್ದಕ್ಕೆ ಕ್ಷಮೆ ಇರಲಿ. ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು. ನೀವು ಕೊಟ್ಟಿರುವ ಎಲ್ಲಾ ಉತ್ತರಗಳು ಸು೦ದರವಾಗಿವೆ. ಮೊದಲ ಬಹುಮಾನ ಸುಮಾ ಅವರಿಗೆ.
ನಿಮಗೋಸ್ಕರ ಸು೦ದರವಾದ ಗ್ಲಾಡಿಯೋಲಸ್ ಹೂವೊ೦ದನ್ನು ಕೊಡುತ್ತಿದ್ದೇನೆ :)


8 comments:

 1. ಹುಡುಗನ ಬಳಿ ನೀಲಿ ಗ್ಲಾಡಿಯೋಲಸ್ ಗುಚ್ಛವನ್ನು ಸೆಳೆದುಕೊಂಡು ಓಡಿದಳು ಆ ಹುಡುಗಿ ಕೆಂದಾವರೆಯಂತಹ ಮುಖದಲ್ಲಿ. ಮನದಲ್ಲಿ ಸಾವಿರ ವೀಣೆಯ ಝೇಂಕಾರ. ಎಳೆಬಿಸಿಲಿಗೆ ಆಡಲು ಬಿಟ್ಟ ಎಳೆಗರುವಿನ ಹೆಜ್ಜೆ . ನಡುನಡುವೆ ಹಿಂತಿರುಗಿ ಅವನೇನಾದರೂ ಹಿಂಬಾಲಿಸುತ್ತಿದ್ದಾನಾ ಎಂದು ಗಮನಿಸುತ್ತಾಳೆ. "ಛೆ ಅವ ಹೇಗೆ ಬರಬಲ್ಲ ಅಂಗಡಿ ಬಿಟ್ಟು " ತನ್ನ ಕಾತರಕ್ಕೆ ತಾನೆ ನಗುತ್ತಾಳೆ.ಅವಳ ನಗುವಿನಲ್ಲಿ ಮಿಂದ ಗ್ಲಾಡಿಯೋಲಸ್ ಇನ್ನಷ್ಟು ಅರಳಿ ಬೆಳಕಾಗುತ್ತದೆ.
  ಆ ಅಂಗಡಿಯ ಪಕ್ಕದ ಗಲ್ಲಿಯಲ್ಲಿ ನಾಲ್ಕು ಹೆಜ್ಜೆ ಸಾಗಿದರೆ ಸಿಗುವ ರಸ್ತೆಯ ಕೊನೆಯಲ್ಲಿ ಸಿಗುವ ಸರ್ಕಲ್ ದಾಟಿದರೆ ಅವಳ ಆಫೀಸ್ . ಆಫೀಸಿನಲ್ಲಿ ಕುಳಿತು ನನ್ನ ಮನದ ಭಾವಗಳನ್ನು ಹಾಳೆಗಿಳಿಸಿಬಿಡಬೇಕು . ಆತನೂ ತನ್ನನ್ನು ಖಂಡಿತಾ ಪ್ರೀತಿಸುತ್ತಾನೆ . ಇಷ್ಟುದಿನ ತಮ್ಮಿಬ್ಬರ ಕಣ್ಣೋಟದಲ್ಲೇ ವಿನಿಮಯವಾದ ಸಾವಿರ ಮಾತುಗಳಿಗೆ ನಾಳೆ ಶಬ್ದರೂಪ ನೀಡಲೇಬೇಕು . ನಾಳೆ ನಿಂತು ಅವನ ಬಳಿ ಮಾತನಾಡಬೇಕು ....ತನ್ನ ಮನದ ಭಾವನೆಯನ್ನು ಹಂಚಿಕೊಳ್ಳಬೇಕು ಯೋಚಿಸುತ್ತಲೇ ಆಕೆಯ ಕೆನ್ನೆ ಇನ್ನಷ್ಟು ಕೆಂಪಾಗುತ್ತದೆ . ಅದೇ ನೆನಪಲ್ಲಿ ಸರ್ಕಲ್ ದಾಟಲು ಹೆಜ್ಜೆಯಿಡುತ್ತಾಳೆ. ಟ್ರಾಫಿಕ್ ಪೋಲೀಸ್ ಗಾಬರಿಯಲ್ಲಿ ಸೀಟಿ ಊದುವುದು ಆಕೆಗೆ ಕೇಳಿಸುವುದೇ ಇಲ್ಲ. ಹತ್ತಿರದಲ್ಲೇ ಬರುತ್ತಿದ್ದ ಟ್ರಕ್ ಡ್ರೈವರ್ ಬ್ರೇಕ್ ಹಾಕಿ ನಿಲ್ಲಿಸಲು ಹೋದರೂ ಸಾಧ್ಯವಾಗದೆ ಮುಂದಿನ ಚಕ್ರ ಹುಡುಗಿಯ ಮೇಲೆಯೆ ಹರಿದುಹೋಗುತ್ತದೆ . ಶುಭ್ರಬಿಳುಪಿನ ಸಲ್ವಾರ್ ರಕ್ತವರ್ಣಕ್ಕೆ ತಿರುಗುತ್ತದೆ. ಕೈಯಲ್ಲಿನ ಗ್ಲಾಡಿಯೋಲಸ್ ಗುಚ್ಛ ಚೆಲ್ಲಾಪಿಲ್ಲಿಯಾಗಿ , ಬಾಡುತ್ತದೆ. ಬಿದ್ದ ಹುಡುಗಿಯ ಕಣ್ಣುಗಳಲ್ಲಿನ್ನೂ ಕನಸಿನ ಹೊಳಪು , ಆದರೆ ಅದನ್ನು ನನಸಾಗಿಸಬೇಕಾದ ಉಸಿರು ನಿಂತಿದೆ .
  " ಛೆ ಏನು ಹುಡುಗೀರೋ ಹಗಲುಗನಸು ಕಾಣುತ್ತಾ ಜೀವ ಕಳೆದುಕೊಳ್ಳುತ್ತವೆ" ಟ್ರಾಫಿಕ್ ಪೋಲೀಸ್ ಗೊಣಗುತ್ತಾ ಅಂಬುಲೆನ್ಸಿಗೆ ಫೋನ್ ಒತ್ತುತ್ತಾನೆ.

  ಕೇವಲ ಒಂದು ಫರ್ಲಾಂಗ್ ದೂರದಲ್ಲಿ ನಡೆದ ಈ ಘಟನೆಯ ಅರಿವಿಲ್ಲದ ಹೂವಿನಂಗಡಿ ಹುಡುಗ ಇಂದಿಗೂ ಆ ಕಣ್ಣುಗಳಿಗಾಗಿ ಬರುವ ಬಸ್ಸನ್ನೆಲ್ಲ ಹುಡುಕುತ್ತಿದ್ದಾನೆ.

  ReplyDelete
 2. she's clever, she made both of them to pay for "flower" with out knowing what it is.

  -HaageSumane

  ReplyDelete
 3. ದುಡ್ಡೂ ಕೊಡದೇ ಹಾಗೇ ಹೋದದ್ದರಿ೦ದ ಅವಳು ’ಹೂಕಳ್ಳಿ’ ನೇ ಇರ್ಬೇಕು..!!

  ReplyDelete
 4. ಹಹಹ ಕವಿತಾ....ನಿಮ್ಮ ಈ ಪರಿ ಇಷ್ಟ ಆಯ್ತು...ನಿಮ್ಮ ಮನದ ಪ್ರಶ್ನೆಯನ್ನು ನಮ್ಮ ಮನಕ್ಕೆ ವರ್ಗಾವಣೆ..??
  ನೀಲಿ ಹೂಗುಛ್ಛದ ಹುಡುಗಿ ಆ ಹುಡುಗನಿಗೆ ಮಾರುಹೋಗಿದ್ದಳು...ಹಣ ಕೊಡದೆ ಓಡುವ ಹುಡುಗಿಯನ್ನು ಏಯ್..ದುಡ್ಡು ಕೊಡದೇ ಹೋಗ್ತೀಯಾ ಅಂತ ಅಟ್ಟಿಸಿಕೊಂಡು ಹೋಗಿದ್ದರೆ ಹಣ ಕೊಟ್ಟು ಹೋಗುತ್ತಿದ್ದಳು..ಆದರೆ ಹಾಗಾಗದೆ ಇದ್ದಾಗ ಅವನು ಅವಳಿಗೆ ಮೆಚ್ಚುಗೆಯಾದ..ತನ್ನ ಅಪ್ಪ-ಅಮ್ಮನಿಗೆ ತನ್ನ ಕನಸಿನ ಹುಡುಗನನ್ನು ತೋರಿಸಲು ಊರಿಗೆ ಹೋಗಿದ್ದಾಳೆ,,,ಬರ್ತಾಳೆ ಬಿಡಿ...ಅರ್ಜೆಂಟ್ ಮಾಡಿದ್ರೆ ಹೇಗೆ,,,,?

  ReplyDelete
 5. ಆ ಹುಡುಗಿಯ ಕನಸುಗಳಿಗೊಂದು ನೆಲೆ ಕಲ್ಪಿಸಿಕೊಟ್ಟಿದ್ದೇ ಆ ನೀಲಿ ಹೂ ಗುಚ್ಛ ಹಾಗೂ ಅದರ ಮಾಲೀಕ. ರಂಗು ರಂಗಿನ ಹೂಗಳೊಳಗಿನ ಬಣ್ಣ ಕಣ್ತುಂಬಿಕೊಳ್ಳುತ್ತಿದ್ದ ಆ ಹುಡುಗನ ಕನಸಿಗೊಂದು ರೂಪ ಕೊಟ್ಟಿದ್ದು ಆ ಹುಡುಗಿಯ ನೋಟ ಹಾಗೂ ಕಿರುನಗೆ. ಅವಳೊಳಗಿನ ಚೆಲುವು ಕಂಡಾಗಲೆಲ್ಲಾ ಆತನಿಗೆ ನೆನಪಾಗುತಿದ್ದುದೇ ನೀಲಿ ಗ್ಲಾಡಿಯೋಲಸ್ ಸೌಂದರ್ಯ.
  ದುಡ್ಡು ತೆತ್ತು ಕೊಂಡು ಹೋದರೆ ಅದು ವ್ಯಾಪಾರವಾಗುತ್ತಿತ್ತು. ಅಲ್ಲಿಗೆ ಅವಳ ಹಾಗೂ ಆತನ ಇಬ್ಬರ ಕನಸೂ ಮುಗಿದುಹೋಗುತಿತ್ತು! ದುಡ್ಡು ಕೊಡದೇ ಕದ್ದು ಓಡಿದ ಆಕೆಯ ಪರಿಯಿಂದ ಆ ಹುಡುಗನ ಕಣ್ಗಳೊಳಗೆ ಈಗ ಸದಾ ಆಶಾಭಾವ... ನಿರೀಕ್ಷೆ... ಕನಸುಗಳ ಸರಮಾಲೆ! ನೀಲಿ ಹೂ ಗುಚ್ಛವೀಗ ತನ್ನ ನಿಜ ಗಮ್ಯವನ್ನು ತಲುಪಿರಬೇಕು.

  ReplyDelete
 6. ಕವಿತಾ,
  ಈ ಅಪೂರ್ಣ ಕತೆಗೆ ಒಂದು ಸಮರ್ಪಕ ಕೊನೆಯನ್ನು ಊಹಿಸಲು ನನ್ನಿಂದ ಸಾಧ್ಯವಾಗಲಿಲ್ಲ. ದಯವಿಟ್ಟು ನೀವೇ ಕತೆಯನ್ನು ಪೂರ್ಣಗೊಳಿಸಿ ಬರೆಯಿರಿ. ನೀವು ಬರೆಯುವ ಸಮಸ್ಯಾಪೂರ್ತಿಗಾಗಿ ಕಾಯುತ್ತಿದ್ದೇನೆ.

  ReplyDelete
 7. ಅಂಬಿಕಾ , ಎಲ್ಲ ಆಂಗಲ್ ನಿಂದ ನೋಡಿದರೂ ಸುಮಾ ಅವರು ಬರೆದ ಎಂಡ್ ಚೆನ್ನಾಗಿದೆ ..

  ReplyDelete
 8. nice one :)
  hope u might like my stories too
  at
  http://www.pallakki.blogspot.in/

  ReplyDelete