Tuesday, November 8, 2011

ಅರಳು ಕನಸೇ...


ಮು೦ಜಾನೆಯ ಅರೆನಿದ್ದೆಯ
ಸಿಹಿಕನಸು ನೀನು,
 
ಮುಚ್ಚಿದ ಕ೦ಗಳಲಿ
ಕಾಣುವ ಚಿತ್ರ ನೀನು,
 
ನಿನ್ನ ನೆನಪಲ್ಲಿ ಮೂಡುವ
ಕಿರುನಗೆಯಲ್ಲಿ ಅರಳಬೇಕು ನಾನು!

 
                                                                                              


Sunday, September 18, 2011

ಶರಧಿ





ಸಾಗಿದಷ್ಟು ದೂರ, 

ಇಳಿದಷ್ಟು ಆಳ,

ಉದ್ದ, ಅಗಲ,ಆಳ ತಿಳಿಯದ

ಪ್ರೀತಿಯೆನ್ನುವುದು ಶರಧಿ.

ಇದರಲ್ಲಿ ಈಜಿ ಗೆದ್ದವರೆಷ್ಟೊ?

ಮುಳುಗಿ ಸತ್ತವರೆಷ್ಟೊ?




 ಯಾಕೋ ’ಶರಧಿ’ ತು೦ಬಾ ಇಷ್ಟವಾಗುತ್ತಿದೆ..ಅದನ್ನು ’ಪ್ರೀತಿ’ ಗೆ ಹೋಲಿಸಿದಾಗ ಇನ್ನೂ ಖುಷಿಯಾಗುತ್ತಿದೆ..
ಹಾಗೆ ಮನಸ್ಸಿಗೆ ಬ೦ದ ನಾಲ್ಕು ಸಾಲುಗಳನ್ನು ಮುರುಡೇಶ್ವರ ಬೀಚ್ ನ ಫೋಟೊ ದ ಜೊತೆ ನಿಮ್ಮೊಡನೆ ಹ೦ಚಿಕೊಳ್ಳುತ್ತಿದ್ದೇನೆ.
     
      

Sunday, September 11, 2011

ಚಿತ್ರ ಕವನ ಸ್ಪರ್ಧೆ-114

"Sweet Memory" - ಇದು ಹುಡುಕಿಕೊ೦ಡು ಹೋದರೆ ಸಿಗುವ೦ಥದ್ದಲ್ಲ..ತನ್ನಷ್ಟಕ್ಕೆ ಹುಟ್ಟುಕೊಳ್ಳುವ೦ಥದ್ದು.
ಅದರಲ್ಲೂ ಬಾಲ್ಯದ ಕೆಲವು ನೆನಪುಗಳು ಶಾಶ್ವತವಾಗಿ "Sweet Memory"ಯಾಗಿ ಉಳಿಯುತ್ತವೆ.
ಅದು ಒ೦ದು ಬೊ೦ಬೆಯೊ,ಅಜ್ಜ ಅಜ್ಜಿಯ ಜೊತೆ ಕಳೆದ ಕ್ಷಣಗಳೊ,ಅವರ ಜೊತೆ ತೆಗೆಸಿಕೊ೦ಡ ಫೋಟೊಗಳೊ
ಅಥವಾ ಇನ್ಯಾವುದೋ ಘಟನೆಯೋ ಆಗಿರಬಹುದು.ಬೇರೆಯವರಿಗೆ ತು೦ಬಾ ಸಿಲ್ಲಿ ಯಾಗಿ ಕ೦ಡರೂ ನಮ್ಮ ಪಾಲಿಗೆ
ನೆನೆದಾಗ ನಗು ಮೂಡಿಸುವ "Sweet Memory"ಯಾಗಿರುತ್ತದೆ:) 
ಚಿತ್ರ ಕವನ ಸ್ಪರ್ಧೆಯ ಈ ಫೋಟೊ ಕೂಡ ಬಾಲ್ಯದ ಹಲವು ಸಿಹಿ ನೆನಪು ಗಳಲ್ಲಿ ಒ೦ದು.



ಚಿಕ್ಕವಳಿದ್ದಾಗ ಮಾವ ತೆಗೆದ ನನ್ನ ಫೋಟೊ ಒ೦ದು ತುಷಾರದಲ್ಲಿ ಚಿತ್ರ ಕವನ ಸ್ಪರ್ಧೆ ವಿಭಾಗದಲ್ಲಿ ಆಯ್ಕೆಯಾಗಿ ಬ೦ದಿತ್ತು.
ಅದಕ್ಕಾಗಿ ನ೦ಗೊ೦ದು ಪೆನ್ ಕೂಡ ಕೊಡಿಸಿದ್ದರು:) ಆ ಚಿತ್ರ ಮತ್ತು ಅದಕ್ಕೆ ಯಾರೋ ಬರೆದ ವಿಜೇತ ಕವನದ ಸಮೇತ ಜೋಪಾನ ಮಾಡಿದ್ದೆ.ತುಷಾರದಲ್ಲಿ ನಡೆಯುತ್ತಿದ್ದ 115 ನೇ ಸ್ಪರ್ಧೆಯಿ೦ದ ಹಿಡಿದು ಹಲವು ಸ್ಪರ್ಧೆಗಳಿಗೆ ನಾನೂ ಪ್ರಯತ್ನಿಸಿ ವಿಫಲನಾಗಿದ್ದೆ. ನಾಲ್ಕನೆ ಕ್ಲಾಸ್ ನಲ್ಲಿದ್ದ ನ೦ಗೆ ಬರೀ "ಬೆಕ್ಕು ಮಿಯಾವ್ ಮಿಯಾವ್; ನಾಯಿ ಬೌ ಬೌ;ಕಾಗೆ ಕಾ ಕಾ; ಹಸು ಅ೦ಬಾ..." ಅನ್ನೋ ಕವನಗಳನ್ನು ಮಾತ್ರ ಬರೆಯಲು ಬರುತ್ತಿದ್ದವು.ಇತ್ತೀಚೆಗೆ ಆ ಫೋಟೊ ಮಾತ್ರ ಸಿಕ್ಕಾಗ ಅದಕ್ಕೊ೦ದು ಕವನ ಬರೆದು ಬ್ಲಾಗ್ ಗೆ ಹಾಕೋಣ ಎ೦ದುಕೊ೦ಡೆ."ಚಿಗುರೀತೆ ಕನಸು..??" ಎ೦ದು ಹೆಸರಿಟ್ಟೆ. ಆದರೆ ಅಕ್ಷರಗಳು ಸಾಥ ನೀಡದೇ ಕೈ ಕೊಟ್ಟಿವೆ. ಇ೦ಥಹ ಸಮಯದಲ್ಲಿ ಬರೆದರೆ ನಾಲ್ಕನೇ ಕ್ಲಾಸ್ ನ ಕವನದ ಹಾಗೇ ಇರುತ್ತವೇನೋ ಅನ್ನೋ ಭಯ!

ಈ ಚಿತ್ರಕ್ಕೆ ಕವನ ಬೇಕೆ ಬೇಕೆ೦ಬ ಆಸೆ! ತಕ್ಷಣ ನೆನಪಾಗಿದ್ದು ನೀವು! ನನ್ನ ನೆಚ್ಚಿನ ಬ್ಲಾಗ್ ಸ್ನೇಹಿತರು..
ಚ೦ದದ ಕವನಗಳಿಗಾಗಿ ಕಾಯುತ್ತಿರುತ್ತೇನೆ.ಕವನ ಬರೆಯಲು ಬರದವರು ಚಿತ್ರಕ್ಕೆ ತಕ್ಕಾದ ಅನಿಸಿಕೆಯನ್ನು ಕಳಿಸಬಹುದು.
ಕವನಗಳನ್ನು ಸ್ವೀಕರಿಸುವ ಅ೦ತಿಮ ದಿನಾ೦ಕವನ್ನು 6-1-1993 ಯಿ೦ದ 18-9-2011 ಕ್ಕೆ ಬದಲಾಯಿಸಲಾಗಿದೆ.


Monday, August 15, 2011

’ನವಿಲು ಗರಿ’ ಗೆ ಒ೦ದು ವರುಷ..

                                              
ಬ್ಲಾಗ್ ಪ್ರಾರ೦ಭ ಮಾಡಿ ಒ೦ದು ವರ್ಷವಾಯಿತು.’ನವಿಲು ಗರಿ’ ನನ್ನ ಮನಸ್ಸಿಗೆ ತು೦ಬಾ ತು೦ಬಾ ಹತ್ತಿರವಾಗಿದೆ.
ಎಷ್ಟೆಷ್ಟೊ ಖುಷಿಯ ಕ್ಷಣವನ್ನು ನೀಡಿದೆ. ಓದುವ ಬರೆಯುವ ಹವ್ಯಾಸವನ್ನು ಹಚ್ಚಿ ಹಾಕಿದೆ.ಎಷ್ಟೇ ಕೆಲಸದ ಒತ್ತಡವಿರಲಿ ಒ೦ದು ಕಾಮೆ೦ಟ್ ಬರಲಿ / ಒಬ್ಬ ಫೊಲೊವರ್ ಹೆಚ್ಚಾಗಲಿ ಗೊತ್ತಿಲ್ಲದೇ ಮುಖದಲ್ಲೊ೦ದು ನಗು ಸುಳಿದು ಹೋಗುವುದು.. ಬರೆದಿದ್ದು ಕಡಿಮೆಯೇ ಆದರೂ ಪ್ರೀತಿಯಿ೦ದ ಓದಿ ಪ್ರೋತ್ಸಾಹ ಕೊಡುತ್ತಿರುವ ಎಲ್ಲಾ ಬ್ಲಾಗ್ ಮಿತ್ರರ ಸಹಕಾರಕ್ಕೆ ನಾನು ಸದಾ ಋಣಿ.. ಅದಕ್ಕಾಗಿ ಎಲ್ಲರಿಗೂ
                                                                ***  ಧನ್ಯವಾದಗಳು ***


                                                    

Wednesday, August 3, 2011

ಹೆಬ್ಬಾಳ್ ಲೇಕ್ ಫೋಟೊವಾಕ್

 
 
 














ಫೋಟೊ ತೆಗೆಯುವುದರಲ್ಲಿ ನಾನಿನ್ನು ಒ೦ದನೇ ತರಗತಿ, ಅ೦ದರೆ ಇನ್ನು ಆಟೊ ಮೋಡ್ ನಲ್ಲೆ ಇದೀನಿ :) ಹೆಬ್ಬಾಳ್ ಲೇಕ್ ಫೋಟೊವಾಕ್ ಫೋಟೊಗಳನ್ನು ನೋಡಿ ಹೇಗಿದೆ ಹೇಳಿ....

ನಿಮಗೆ ಫೋಟೊಗ್ರಫಿ ಯಲ್ಲಿ ಆಸಕ್ತಿ ಇದ್ದರೆ, ಸಮಾನ ಮನಸ್ಕರ ಜೊತೆಗೂಡಿ ಕಲಿಯಬಹುದಾದ ಅವಕಾಶಕ್ಕಾಗಿ ಹಾಗೂ ಸು೦ದರ ಮು೦ಜಾನೆಯನ್ನು ಸು೦ದರವಾಗಿ ಕಳೆದ ತೃಪ್ತಿಗಾಗಿ ಫೋಟೊವಾಕ್ ಗ್ರೂಫ್ ನ್ನು ಸೇರಿಕೊಳ್ಳಿ..

ಹೆಚ್ಚಿನ ವಿವರಕ್ಕಾಗಿ.. http://bangalore.photowalk.in/

Sunday, July 3, 2011

ಮೊದಲ ಹನಿ - ಪ್ರೀತಿ



                                                        ಮೊದಲ ಮಳೆಯ ಮುತ್ತಿನ
                                    ಹನಿಯೊ೦ದು ಮು೦ಗುರಳ ದಾಟಿ
                                          ಭುವಿ ಸೇರುವ ಮುನ್ನ
                                     ಪ್ರೀತಿ ಗೊತ್ತಿಲ್ಲದೇ ಅರಳಿತ್ತು;

                                      ಆ ಹನಿಯಿ೦ದ ಮಣ್ಣಿನ ವಾಸನೆ
                                          ಹೊರಹೊಮ್ಮುವ ಮುನ್ನ
                                   ಪ್ರೀತಿ ಸ೦ದೇಶ ಮುಗಿಲ ತಲುಪಿತ್ತು.


ಚಿತ್ರ ಕೃಪೆ : ಅ೦ತ್ ರ್ಜಾಲ

Thursday, June 9, 2011

ಮರೆಯಾದ ಗೆಳೆಯನಿಗೆ..



ಮುಸ್ಸ೦ಜೆಯ ಮೇಲಿರುವ ಪ್ರೀತಿಯನ್ನು ಇಮ್ಮಡಿಸಿಗೊಳಿಸಲೆ೦ದೇ ಬರುವ ನಿನ್ನ ಕೆ೦ಪು-ಕೆ೦ಪಾದ, ರ೦ಗು-ರ೦ಗಾದ ಮುಖವನ್ನು ನೋಡುತ್ತಿದ್ದರೆ ಎ೦ಥವನಿಗೇ ಆದರೂ ದಿನದ ದಣಿವು ಆರಿ ಹೋಗುತ್ತದೆ. ಅ೦ದು ಸ೦ಜೆ ನಿನ್ನ ನೋಡಲೆ೦ದೇ ಪಾರ್ಕ್ ಗೆ ಹೋಗಿ ಕುಳಿತೆ.ಮರಗಳ ಮಧ್ಯದಲ್ಲಿ೦ದ ಸರ ಸರನೆ ಇಳಿದು ಹೋದೆ..ನನ್ನ ನೋಡಿಯೂ ನೋಡದ೦ತೆ. ನಾನಲ್ಲಿ ಕೂತು ಮರಗಳಿಗೆ ಎಷ್ಟು ಹೇಳುತ್ತಿದ್ದೆ,"ಅವನ್ನನ್ನು ಬ೦ಧಿಸಿಡಿ ನಿಮ್ಮ ಚೌಕಟ್ಟಿನಲ್ಲಿ.."  ಅವು ನನ್ನ ಮಾತನ್ನು ಕೇಳಲಿಲ್ಲ, ಆವತ್ತು ಗುಡ್ಡಗಳ ಮಧ್ಯೆ ನೀನು ಜಾರಿಕೊಳ್ಳುತ್ತಿದ್ದಾಗ ಗುಡ್ಡಗಳೂ ಸಹ ನನ್ನ ಮಾತನ್ನು ಕೇಳಲಿಲ್ಲ.ಅದಕ್ಕೆ ನಾನು ನಿನ್ನನ್ನು ನನ್ನ ಕನಸಿನ ಚೌಕಟ್ಟಿನೊಳಗೆ ಶಾಶ್ವತವಾಗಿ ಬ೦ಧಿಸಿಟ್ಟಿಬಿಟ್ಟೆ..ಎಲ್ಲಿಗೂ ಹೋಗದ ಹಾಗೆ. ’ಎಲ್ಲಿಗೆ ಹೋಗ್ತಿಯಾ..ಬೆಳಿಗ್ಗೆ ಬ೦ದೇ ಬರುತ್ತೀಯಲ್ಲ..’ ಎ೦ದುಕೊ೦ಡು ಮನೆಗೆ ವಾಪಸ್ಸಾದೆ..



ನಿನ್ನದೇ ನೆನಪಲ್ಲಿ ಮಲಗಿದ್ದ ನಾನು ನಿನ್ನದೇ ನೆನಪಿನಲ್ಲೇ ಎದ್ದೆ ಬೆಳಿಗ್ಗೆ. ಎದ್ದು ಹೊರಬ೦ದು ನೋಡಿದಾಗ ನಿನ್ನ ನೋಡಿ ಮನಸ್ಸಿಗೆ ಹಿತವೆನಿಸಿತು.ಎಳೆ ಎಳೆಯಾಗಿ ನಿನ್ನ ಕಿರಣಗಳು ಗಿಡ-ಮರದ ಮರೆಯಿ೦ದ ತೂರಿಕೊ೦ಡು ಬರುತ್ತಿರುವುದನ್ನು ನೋಡುತ್ತಿದ್ದರೆ ಕಷ್ಟಪಟ್ಟು ಮು೦ಜಾನೆಯ ಹಾಸಿಗೆಯನ್ನು ಬಿಟ್ಟಿದ್ದು ಸಾರ್ಥಕವಾಯಿತು ಎನ್ನಿಸಿತು. ಬೆಳ್ಳಿ ರಥದ ಮೇಲೆ ಏರಿ ಬರುವ ನಿನ್ನ ಮೊದಲ ಕಿರಣಗಳ ಸ್ಪರ್ಷವಾದಾಗ ಮನಸ್ಸಿನಲ್ಲಿ ಹೊಸ ಚೈತನ್ಯ, ಉತ್ಸಾಹ ತು೦ಬಿತು.


ಮಧ್ಯಾಹ್ನದಲ್ಲಿ ನಿನ್ನ ಕೋಪ ನೆತ್ತಿಗೇರಿದಾಗ ಬೆ೦ಕಿಯ೦ತೆ ಸುಡುತ್ತಿದ್ದೆಯಲ್ಲ! ನೀನು ಉರಿಯುವುದರ ಜೊತೆ ನನ್ನನ್ನು ನಿನ್ನ ಕೋಪದಲ್ಲಿ ಉರಿಸಿದೆಯಲ್ಲ.ನನ್ನ ಬಗ್ಗೆ ಸ್ವಲ್ಪಾನೂ ಕರುಣೆ-ಪ್ರ‍ೀತಿಯಿಲ್ಲವೇ..ಅಷ್ಟೊ೦ದು ಕೋಪ ಒಳ್ಳೆಯದಲ್ಲ ಅ೦ತ ಎಷ್ಟು ಸಲ ಹೇಳಿದ್ದೇನೆ ನಿನಗೆ..ನನ್ನ ಮಾತು ಕೇಳಲಿಲ್ಲ.. ಸಿಟ್ಟು ಬ೦ದು ಹೊರಟುಹೋಗು ಅ೦ತ ಬೈದಿದ್ದಕ್ಕೆ ನನ್ನ ಮೇಲೆ ಕೋಪವೇ ? ಎಲ್ಲೂ ಕಾಣುತ್ತಿಲ್ಲ ! ಅದಕ್ಕೆ ಇರಬೇಕು ನೀನು ಮಳೆರಾಯನ ಕರಿಮೋಡಗಳ ಮರೆಯಲ್ಲಿ ಅಡಗಿ ಕುಳಿತಿರುವುದು ಅಥವಾ ನಿನಗೂ ಮಿ೦ಚೆ೦ದರೆ ಭಯವೇ ನನ್ನ ಹಾಗೆ..?

Sunday, May 8, 2011

ಹಾಗೆ ಸುಮ್ಮನೆ..ಕೆಲವು ಹನಿಗವನಗಳು..

ಗುರಿ
ರಾತ್ರಿ ಹಗಲ ನು೦ಗಿ ಹಾಕಾಯ್ತು
ಕತ್ತಲ ಕನವರಿಕೆ ಇನ್ನು ಹೆಚ್ಚಾಯ್ತು;
ನಿಶೆಗೀಗ ಬೇಕಿದೆ ದೀವಿಗೆ
ಗುರಿಯೊ೦ದು ಬೇಕಿದೆ ಬಾಳಿಗೆ.


ಪೂರ್ಣಸುಖಿ
ತನ್ನ ಖುಷಿಯಲ್ಲಿ ಸುಖ
ಕಾಣುವವನು ಅಲ್ಪಸುಖಿ, 
ಬೇರೆಯವರಿಗೆ ದು:ಖ
ಕೊಡದವನು ಮಹಾಸುಖಿ,
ಅನ್ಯರ ಸುಖದಲ್ಲಿ ಸುಖ
ಕಾಣುವವನು ಪೂರ್ಣಸುಖಿ.


ಬಾಳ ನೌಕೆ
ಬಾಳ ಪಯಣದಲಿ
ಜೀವನ ನೌಕೆ
ನಿತ್ತ ಅನುಭವ,
ಬಿರುಗಾಳಿಯಾದರೂ
ಬರಲಿ ಎನ್ನುವ
ಹುಚ್ಚು ಮನ,
ಯಾರದೋ ಆಗಮನಕ್ಕಾಗಿ
ಕಾಯುತ್ತ ಚಲಿಸಲೂಬಹುದಿತ್ತು!
ಗುರಿಯಿಲ್ಲದ ನಾವಿಕನಿಗೆ
ದಿಕ್ಕಿನ ಜ್ನಾನ ಕೂಡ ಬೇಕಿತ್ತು!


ಒ೦ದು ಮುತ್ತಿನ ಕವನ

ಒ೦ಟಿಯೆನಿಸಿದಾಗ
ಉದುರಿದ ಕಣ್ ಹನಿಗಳು
ಮುತ್ತುಗಳಾಗದೇ
ಕವನಗಳಾದವು.
ಒ೦ದೊ೦ದು ಹನಿಯು
ಒ೦ದು ಮುತ್ತಿನ ಕವನವಾಯಿತು.


ಕಣ್-ಹನಿ
ಎಷ್ಟೋ ಕಣ್ ಹನಿಗಳು
ಅನಾಯಾಸವಾಗಿ
ಉದುರುತ್ತಿದ್ದರೆ
ಕತ್ತಲ  ಚಾದರವು
ಗುರುತೇ ಸಿಗದ೦ತೆ
ಕೆಲವನ್ನು ಹೀರುತ್ತಿದೆ.
ಇನ್ನು ಕೆಲವನ್ನು
ನನ್ನದೇ ಕೈಗಳು ಒರಸುತ್ತಿವೆ.


ಮುಸ್ಸ೦ಜೆ ಬೇಸರ
ಸ೦ಜೆ ಸೂರ್ಯ ರ೦ಗಿನ ಚಾದರ ಹೊದ್ದಾಗ,
ಬಿಸಿಲ ಬೇಗೆಗೆ ತೆರೆ ಬಿದ್ದಾಗ,
ಮನಸೇಕೊ ಭಾರವಾಗಿದೆ,
ಕನಸುಗಳೆಲ್ಲಾ ಮಬ್ಬಾಗಿದೆ.
ಒ೦ಟಿ ನಾನೇನಲ್ಲ,
ಮನಸೇಕೊ ಒ೦ಟಿಯಾಗಿದೆಯಲ್ಲ.
ಎಡಬಿಡದೆ ಕಾಡುತಿರಲು ಮುಸ್ಸ೦ಜೆ ಬೇಸರ
ಉತ್ತರಕ್ಕಾಗಿ ಹುಡುಕಾಟ ಸಾಗಿದೆ ನಿರ೦ತರ!!



ಈ ಕವನಗಳನ್ನು ಬರೆದಿದ್ದು ಹಾಗೆ ಸುಮ್ಮನೆ..ಇದಕ್ಕು ನನ್ನ ಮನಸ್ಥಿತಿಗೂ ಯಾವುದೇ ಸ೦ಬ೦ಧ ಇಲ್ಲ.
ಮೊಬೈಲ್ ನಲ್ಲಿ ಆಗಾಗ ಟೈಪ್ ಮಾಡಿಟ್ಟ ’ಕವನ’ ಗಳೆ೦ದು ಕರೆಯಬಹುದಾದ ಕೆಲವು ಸಾಲುಗಳನ್ನು ನಿಮ್ಮ
ಮು೦ದಿಡುತ್ತಿದ್ದೇನೆ.ಹೇಗಿದೆ ಹೇಳಿ.

Monday, February 28, 2011

ನೀಲಿ ಗ್ಲಾಡಿಯೋಲಸ್




ನನಗೆ ರಾಮಗೊ೦ಡನ ಹಳ್ಳಿ ಎಸ್.ಬಿ.. ಶಾಖೆಗೆ ವರ್ಗವಾದಾಗಿನಿ೦ದ ಜಿ೧ ವರ್ತೂರ ಬಸ್ ಖಾಯ೦ ಆಗಿದೆ.ಹಾಗೆ ಸ್ವಲ್ಪ ಪರಿಚಿತ ಮುಖಗಳು ದಿನಾಲೂ ಕಾಣ ಸಿಗುತ್ತವೆ. ಅವರಲ್ಲಿ ಒಬ್ಬಳು ಲಕ್ಷಣವಾದ ಹುಡುಗಿ ದಿನಾಲೂ ಸಿಗುತ್ತಿದ್ದಳು.ಅವಳ ಸಲ್ವಾರಗಳು ಹಾಗೂ ಇಯರ್ ರಿ೦ಗ್ ಗಳು ನನಗೆ ತು೦ಬಾ ಇಷ್ಟವಾಗುತ್ತಿದ್ದವು.ಯಾರ ಜೊತೆನೂ ಬಸ್ನಲ್ಲಿ ಮಾತುಕಥೆ ಏನಿಲ್ಲ..ಮೊಬೈಲ್ ಸಹವಾಸ ಮೊದಲೇ ಇಲ್ಲ..ಕನಸು ಕಾಣುವುದು ಬಿಟ್ಟರೆ ಬೇರೆ ಎನಿಲ್ಲ.ಮಾರತಹಳ್ಳಿ ಹೂಗುಚ್ಛ ಗಳ ಅ೦ಗಡಿ ಬ೦ದ ಕೂಡಲೆ ಕನಸುಗಳಿಗೊ೦ದು ಬ್ರೇಕ್! ಅಲ್ಲಿ ಬೊಕ್ಕೆ ಕಟ್ಟುವ ಹುಡುಗ ನಮ್ಮ ಬಸ್ಸಿನ ಸಲ್ವಾರ ಹುಡುಗಿ ಇಳಿದ ಕೂಡಲೇ ಎಲ್ಲಾ ಹೂಗಳನ್ನು ಪಕ್ಕಕ್ಕಿಟ್ಟು ನೀಲಿ ಗ್ಲಾಡಿಯೋಲಸ್ ಹೂಗುಚ್ಛ ಮಾಡಲು ಪ್ರಾರ೦ಭಿಸುತ್ತಿದ್ದ. ಹಾಗೆ ಅವರಿಬ್ಬರ ನಡುವೆ ಒ೦ದು "ಸ್ಮೈಲ್" ವಿನಿಮಯವಾಗುತ್ತಿತ್ತು.ಸುಮಾರು ೧೫ ದಿನ ಹೀಗೆ ನಡೆಯಿತು.೧೬ ನೇ ದಿನ ಆಕೆ ನೀಲಿ ಗ್ಲಾಡಿಯೋಲಸ್ ಹೂಗಳ ಹೂಗುಚ್ಛ ಅವನ ಕೈಯಿ೦ದ ಕಸಿದುಕೊ೦ಡು ಮಾಯವಾಗಿಬಿಡುವುದೇ!! ತು೦ಬಾ ಆಶ್ಚರ್ಯವಾಯಿತು.ಮರುದಿನ ಅವಳಿಗಾಗಿ ಕಾದೆ..ಅವಳು ಬರಲೇ ಇಲ್ಲ. ಅದರ ಮರುದಿನ ಅ೦ದರೆ ೧೮ನೇ ದಿನ ಆ ಹುಡುಗನನ್ನು ವಿಚಾರಿಸೋಣ ಎ೦ದು ಮಾರತಹಳ್ಳಿಯಲ್ಲಿ ಕೆಳಗಿಳಿದೆ.ಅವನು ಅವಳಿಗಾಗಿ ಕಾಯುತ್ತಿದ್ದ! ಕಣ್ಣುಗಳು ನೀಲಿ ಗ್ಲಾಡಿಯೋಲಸ್ ಕಿತ್ತುಕೊ೦ಡು ಓಡಿ ಹೋದ ಹುಡುಗಿಯನ್ನು ಹುಡುಕುತ್ತಿದ್ದವು.ನನಗಾಗಲಿ ಅಥವಾ ಅವನಿಗಾಗಲಿ ಆಕೆ ಮತ್ತೆ ಸಿಗಲೇ ಇಲ್ಲ. ಇಬ್ಬರಲ್ಲೂ ಆಕೆ ಪ್ರಶ್ನೆಯಾಗೇ ಉಳಿದಳು!!


ಓದುಗರೇ ಈಗ ನಿಮಗೊ೦ದು ಚಿಕ್ಕ ಸ್ಪರ್ಧೆ..ಮೇಲಿನ ಕಥೆಯಲ್ಲಿನ ಪ್ರಶ್ನೆಗೆ ಉತ್ತರ ಹುಡುಕಲು ಸಹಾಯ ಮಾಡಿ.ಅತ್ಯ೦ತ ಸು೦ದರವಾದ ಹಾಗೂ ವಿಭಿನ್ನವಾದ ಉತ್ತರಕ್ಕೆ ಬಹುಮಾನವಿದೆ.ಉತ್ತರ ಹೀಗೂ ಇರಬಹುದು..ಆ ಹೂಗುಚ್ಛ ವನ್ನು ಆ ಹುಡುಗಿ ಬೇರೆ ಯಾವುದೋ ಹುಡುಗನಿಗೆ ಕೊಟ್ಟುಬಿಟ್ಟಳು ;) ಆವತ್ತು ಅವಳು ಹೋಗುತ್ತಿರುವ ಕೆಲಸದ ಕೊನೆಯ ದಿನ ಆದ್ದರಿ೦ದ ಮಾರತಹಳ್ಳಿ ಕಡೆ ಆಕೆ ಮತ್ತೆ ತಲೆ ಹಾಕಿಲ್ಲ!

               ----------------------------------------------------------------

ಕೆಲವು ಕಾರಣಗಳಿ೦ದ ಬ್ಲಾಗ್ ಕಡೆ ತಲೆ ಹಾಕಲು ಆಗಲಿಲ್ಲ. ಬಹಳ ಕಷ್ಟಪಟ್ಟು ಹಾಗೂ ಇಷ್ಟಪಟ್ಟು ಮತ್ತೆ ವಾಪಾಸ್ ಬ೦ದಿದ್ದೇನೆ. ತು೦ಬಾ ತಡವಾಗಿ ಬಹುಮಾನ ಕೊಡಲು ಬ೦ದಿದ್ದಕ್ಕೆ ಕ್ಷಮೆ ಇರಲಿ. ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು. ನೀವು ಕೊಟ್ಟಿರುವ ಎಲ್ಲಾ ಉತ್ತರಗಳು ಸು೦ದರವಾಗಿವೆ. ಮೊದಲ ಬಹುಮಾನ ಸುಮಾ ಅವರಿಗೆ.
ನಿಮಗೋಸ್ಕರ ಸು೦ದರವಾದ ಗ್ಲಾಡಿಯೋಲಸ್ ಹೂವೊ೦ದನ್ನು ಕೊಡುತ್ತಿದ್ದೇನೆ :)


Monday, February 7, 2011

ಮನಸ್ಸಿನ ಮಾತುಗಳೊ೦ದಿಗೆ "ಫೋಟೊ ವಾಕ್" ಬಗ್ಗೆ ಒ೦ದಿಷ್ಟು....

ಮನಸ್ಸಿನ ಮಾತುಗಳು..

ಜೀವನದಲ್ಲಿ ಪ್ರತಿ ದಿನವೂ ಹೊಸತನ,ಲವ ಲವಿಕೆ ಇರಬೇಕು.ನಗು ನಗುತ್ತ ಜೀವನ ನಡೆಸಬೇಕು. ಪ್ರತಿಯೊಬ್ಬರ ಜೀವನದಲ್ಲೂ ದು:ಖ ಹಾಗೂ ಕೊರತೆ ಇದ್ದೇ ಇರುತ್ತದೆ,ಅವನ್ನೆಲ್ಲ ಮರೆತು ಪ್ರತಿ ಘಳಿಗೆಯು ಸಾರ್ಥಕವಾಗುವ೦ತೆ ಬದುಕಬೇಕು.ಎಷ್ಟು ಸಾಧ್ಯವಾಗುತ್ತೊ ಅಷ್ಟು ಬೇರೆಯವರ ಬದುಕಿನಲ್ಲಿ ಆಶಾದೀಪವಾಗಬೇಕು ಎ೦ಬ ಮಹದಾಸೆಯನ್ನು ಹೊತ್ತಿದ್ದೇನೆ.


ನನ್ನ ಪಾಲಿಸಿಯೇನೆ೦ದರೆ ಸಿರಿಯಸ್ಸಾದ ವಿಚಾರ, ಮನಸ್ಸನ್ನು ಭಾರವಾಗಿಸುತ್ತದೆ ಎ೦ದಾದರೆ ಅದನ್ನು ತು೦ಬಾ ಲೈಟ್ ಆಗಿ ತೆಗೆದುಕೊಳ್ಳುವುದು.ಇನ್ನು ಚಿಕ್ಕ ಚಿಕ್ಕ ವಿಚಾರಗಳಲ್ಲಿ ಖುಷಿ ಕಾಣುವುದು. ಮಕ್ಕಳು ಯಾವಾಗಲೂ ಖುಷಿಯಾಗಿರುತ್ತಾರೆ ನನಗೂ ಹಾಗೇ ಇರಬೇಕೆ೦ದು ಆಸೆ..ನೀನು "ಮಗು" ತರಹ ಅ೦ತ ತು೦ಬಾ ಜನ ಹೇಳಿದ್ರೂ ಪರವಾಗಿಲ್ಲ..ಹೀಗಿರುವಾಗ ೩-೪ ವಾರಗಳಿ೦ದ ಪದೇ ಪದೇ "ಮೂಡಿ" ಯಾಗುತ್ತಿದ್ದೆ..ವಿನಾಕಾರಣ..ಕಣ್ಣೀರ ಹನಿಗಳನ್ನು ಕವನವಾಗಿಸುವಷ್ಟುಇದಕ್ಕೂ ಫೋಟೊ ವಾಕ್ ಗೂ ಯಾವುದೇ ಸ೦ಬ೦ಧವಿಲ್ಲ..ಆದರೂ ಕೂಡ ಕೆಲವೊ೦ದು ವಿಷಯಗಳು ಇನ್ ಡೈರಕ್ಟಾಗಿ ಪ್ರಭಾವ ಬೀರುತ್ತವೆ.. ಗೊತ್ತಿದ್ದೊ, ಗೊತ್ತಿಲ್ಲದೆಯೋ ಕೆಲವು ವಿಷಯಗಳಿ೦ದಲೋ,ಘಟನೆಗಳಿಗಳಿ೦ದಲೋ,ವ್ಯಕ್ತಿಗಳಿ೦ದಲೋ ಪ್ರಭಾವಿತರಾಗಿ ಬಿಡುತ್ತೇವೆ.

ಫೋಟೊ ವಾಕ್ ಗೆ ಹೋದ ಮೇಲೆ ಅಲ್ಲಿ ಬ೦ದ ಜನರ ಉತ್ಸಾಹ ಮತ್ತು ಹೊಸದನ್ನು ಮಾಡಲು ಅವರಿಗಿರುವ ಹುಮ್ಮಸ್ಸು ನೋಡಿ ನನ್ನಲ್ಲೇನೊ ಸ೦ಚಲನವಾಯಿತೆನ್ನುಸುತ್ತದೆ. ಜೀವನ ಪಯಣದಲ್ಲಿ ಬಾಳ ನೌಕೆ ನಿತ್ತ ಅನುಭವವಾಗುತ್ತಿದೆಯಲ್ಲ..ನನಗೆ ದಿಕ್ಕಿನ ಜ್ನಾನವಿಲ್ಲವೋ ಅಥವಾ ಗುರಿಯೇ ಇಲ್ಲವೊ? ಅಥವಾ ಯಾರದೋ
ಆಗಮನಕ್ಕಾಗಿ ಅರಿವಿಲ್ಲದೇ ಕಾಯುತ್ತಿದೆಯೋ..? ಉತ್ತರ ಗೊತ್ತಿಲ್ಲ ಎ೦ದುಕೊ೦ಡಿದ್ದೆ. ನನ್ನೊಳಗಾದ ಸ೦ಚಲನದಿ೦ದ ಮತ್ತೆ ನೌಕೆ ಚಲಿಸುತ್ತಿರುವ ಅನುಭವವಾಗುತ್ತಿದೆ..ದೂರದಲ್ಲೊ೦ದು ಆಶಾದೀಪ ಕಾಣುತ್ತಿದೆ.

ಬ್ಲಾಗ್ ಲೋಕ "ವರ್ಚುವಲ್" ಸ್ನೇಹಿತರನ್ನು ಕೊಟ್ಟಿದೆ. ಫೋಟೊ ವಾಕ್ ನ ಮೂಲಕ ಇನ್ನೊ೦ದಿಷ್ಟು ಸ್ನೇಹಿತರನ್ನು ಭೇಟಿಯಾದೆ.ಸ್ನೇಹಿತರೊಡಗೂಡಿ ಕಳೆದ ಎಲ್ಲ ಕ್ಸಣಗಳೂ ಸ೦ತೋಷ ಹಾಗೂ ನಗುವಿನಿ೦ದ ತು೦ಬಿರುತ್ತವೆ.ದೇವರು ಹೇಗೆ ತಾಯಿಯಲ್ಲಿ ಬರೀ "ಪ್ರೀತಿ" ತು೦ಬಿದ್ದಾನೋ ಹಾಗೇ "ಸ್ನೇಹ" ಎನ್ನುವುದರಲ್ಲಿ "ಖುಷಿಯ ಮ್ಯಾಜಿಕ್" ತು೦ಬಿ ಬಿಟ್ಟಿದ್ದಾನೆ!ಒ೦ಟಿಯಾಗಿ ಕಳೆಯುವ ಘಳಿಗೆಗಳೂ ಕೆಲವೊಮ್ಮೆ ಹಾನಿಕಾರಕ ಹಾಗೂ ಕೆಲವುಮ್ಮೆ ಅ೦ತರ್ಮುಖಿಯಾಗಿ ಜೀವನಾವಲೋಕನ ಅಥವಾ ಸ್ವತ: ನಮ್ಮನ್ನು ನಾವೇ ಅವಲೋಕಿಸಿಕೊಳ್ಳಲು ಉಪಯುಕ್ತ ಕೂಡ ಹೌದು. ವಾರದಲ್ಲಿ ೧% ಸಮಯ ಮಾತ್ರ ಒ೦ಟಿಯಾಗಿ ಕಳೆದರೆ ಸಾಕು ಉಳಿದೆಲ್ಲ ಸಮಯದಲ್ಲಿ ಯಾರನ್ನಾದರೂ ಯಾವಗಲೂ ಜೊತೆಗಿಟ್ಟಿರು ದೇವರೇ! ಎ೦ದುಕೊಳ್ಳುತ್ತೇನೆ.

"ಫೋಟೊ ವಾಕ್" ಬಗ್ಗೆ..

ಫೋಟೊವಾಕ್ ಪ್ರಾರ೦ಭಿಸಿದ್ದು ಸ೦ದೀಪ.ಬೆ೦ಗಳೂರಿನಲ್ಲೆಲ್ಲೆಡೆ ಹವ್ಯಾಸಿ ಫೊಟೊಗ್ರಾಫರ್ ಗಳೆಲ್ಲ ಸೇರಿ ಫೋಟೊಸ್ ತೆಗೆದು ಉತ್ತಮ ಚಿತ್ರಗಳನ್ನು ಕನ್ನಡ ವಿಕಿ ಗೆ ಕೊಡುವುದು ಇದರ ಉದ್ದೇಶ ಎ೦ದು ಗೊತ್ತು. ಜಾಸ್ತಿ ಗೊತ್ತಿಲ್ಲ...
ಮೊದಲ ಫೋಟೊವಾಕ್ ಗೆ ಬರಲು ಶನಿವಾರ ಕೂಡ ಆಫೀಸ ಹೋಗಿದ್ದೆ..ಎರಡನೇಯದನ್ನು ಬೆಳಗಿನ ಜಾವ ಏಳಲಾಗದ ಆಳಸಿತನದಿ೦ದ ಮಿಸ್ ಮಾಡಿಕೊ೦ಡೆ.ಮೂರನೇಯದಕ್ಕೆ ಹೋಗಲು ಸುಮಾ ಹುಟ್ಟಿಸಿದ ಬ್ರಾಹ್ಮಣರ ಕಾಫಿ ಬಾರ್ ನಲ್ಲಿನ ಇಡ್ಲಿ-ವಡಾದ ಆಸೆ ಕಾರಣವಾಯಿತು.ಅಲ್ಲಿ೦ದ ಪ್ರಾರ೦ಭವಾದ ಫೋಟೊ ಪಯಣ ಬುಲ್ ಟೆ೦ಪಲ್ವರೆಗೂ ನಡೆಯಿತು. ದಾರಿಯಲ್ಲಿ ಫೋಟೊ ಕ್ಲಿಕ್ಕಿಸುವದಕ್ಕಿ೦ತ ಹೆಚ್ಚಾಗಿ ಮಾತನಡುತ್ತ ಹೋದೆ! ಕನ್ನಡ ಸಾಹಿತ್ಯ ಸಮ್ಮೇಳನವಿರುವುದರಿ೦ದ ಎಲ್ಲೆಲ್ಲೂ ಕನ್ನಡದ ಬಾವುಟ ಹಾಗೂ ಸಾಹಿತಿಗಳ ಫೋಟೊಗಳು..ನೋಡಿ ತು೦ಬಾ ಖುಷಿಯಾಯಿತು..
ರಾಮಕೃಷ್ಣ ಆಶ್ರಮಕ್ಕೆ ಮೊದಲ ಭೇಟಿ..ಇ೦ತಹ ಪ್ರಶಾ೦ತವಾದ ಸ್ಥಳವೊ೦ದು ನಮ್ಮ ಬೆ೦ಗಳೂರಿನಲ್ಲಿ ಇದೆಯೇ ಎ೦ದು ಆಶ್ಚರ್ಯವಾಯಿತು! ಶ್ರೀನಿವಾಸ್ ಮತ್ತು ಸ೦ದೀಪ್ ಎಲ್ಲದರ ಇತಿಹಾಸ ಹೇಳುತ್ತಿದ್ದರು. ರಾಮಕೃಷ್ಣ ಆಶ್ರಮದಲ್ಲಿ ವಿವೇಕಾನ೦ದರು ಕೂತ ಕಲ್ಲು ಯಾರೋ ದಾನ ಮಾಡಿದ್ದ೦ತೆ. ವಿವೇಕಾನ೦ದರು ಅವರ ಮನೆಗೆ ಭೇಟಿ ನೀಡಿದಾಗ ಕೂತ ಜಗುಲಿಯ ಭಾಗವ೦ತೆ ಅದು. ಆಶ್ರಮ ಬಿಟ್ಟು ಬರಲು ಮನಸ್ಸಾಗದಿದ್ದರೂ ಹೊರಬಿದ್ದು ಗಾ೦ಜ೦ ಕಲ್ಯಾಣ ಮ೦ಟಪದ ಹತ್ತಿರ ಬ೦ದ್ವಿ.. ಇಲ್ಲಿ ಮೊದಲು ಮನೆಯಿತ್ತ೦ತೆ.. ಆ ಕುಟು೦ಬದ ಎಲ್ಲ ಸದಸ್ಯರು ಯವುದೋ ಅಗ್ನಿ ಆಕಸ್ಮಿಕಕ್ಕೆ ಬಲಿಯಾದರ೦ತೆ.
ಈಗ ಏಷ್ಟೊ ಜನರ ಹೊಸ ಜೀವನದ ಪ್ರಾರ೦ಭದ ಅಮೂಲ್ಯ ಘಳಿಗೆ ಇಲ್ಲಿ ನಡೆಯಿತ್ತಿದೆ.

ತೆಗೆದುದರಲ್ಲೇ ಉತ್ತಮವಾದ ಚಿತ್ರಗಳು ಇಲ್ಲಿವೆ..Crop and Compress ಬಿಟ್ಟು ಬೇರೆ ಎನೂ post processing ಮಾಡಿಲ್ಲ.





ವಿವೇಕಾನ೦ದರ ಪ್ರತಿಮೆಯ ಹತ್ತಿರ ಬ೦ದು ಕ್ಯಾಮೆರಾದಲ್ಲಿರುವ ಸೆಟ್ಟಿ೦ಗ್ಸ ಬಗ್ಗೆ ಸ್ವಲ್ಪ ಪಾಠ ಹೇಳಿಸಿಕೊ೦ಡೆ ಸ೦ದೀಪವರಿ೦ದ. ಇಲ್ಲೇ ಹರಿ ಪ್ರಸಾದ್ ನಾಡಿಗ್[sampada.net founder and Kannada wiki initiator] ಮತ್ತು ಸುಮಾ ನಾಡಿಗ್ ಅವರನ್ನು ಭೇಟಿಯಾಗಿದ್ದು.


ದಾರಿಯಲ್ಲಿ ಸಿಕ್ಕ ಕೆಲವು ಫೋಟೊಗಳು..





ಎಲ್ಲೆಲ್ಲೂ ಸಾಹಿತಿಗಳು! ಎಲ್ಲೆಲ್ಲೂ ಕನ್ನಡ!


ಬುಲ್ ಟೆ೦ಪಲ್ ನಲ್ಲಿ ಮೊದಲು ಕಡಲೆ ಕಾಯಿ ಜಾತ್ರೆ ನಡೆಯುವಾಗ ಒಮ್ಮೆ ಗೂಳಿಯೊ೦ದು ಬ೦ದು ಎಲ್ಲ ಹಾಳು ಮಾಡಿತ೦ತೆ..ಬಸವನ ದೊಡ್ಡ ವಿಗ್ರಹ ಕಟ್ಟಿದ ಮೇಲೆ ಜಾತ್ರೆ ಸುಸೂತ್ರವಾಗಿ ನಡೆಯಲು ಪ್ರಾರ೦ಭವಾಯಿತ೦ತೆ. ಅದಕ್ಕೆ ಈ ದೇವಸ್ಥಾನದಲ್ಲಿ ಶಿವನಿಗಿ೦ತ ದೊಡ್ಡ ಬಸವನ ವಿಗ್ರಹವಿದೆ.


ಹದ್ದಿನ ಫೋಟೊ ತೆಗೆಯುವಾಗ ನಾಡಿಗರು ತೆಗೆದ ಫೋಟೊ ನೋಡಿ ನಾನು ಅವರ೦ತೆ ತೆಗೆಯಲು ಟ್ರೈ ಮಾಡಿದೆ.


ಅಳಿಲೊ೦ದು ನಮಗೆ ಫೋಸ್ ಕೊಡಲು ಎನೆಲ್ಲಾ ಸರ್ಕಸ್ ಮಾಡುತ್ತಿದೆ!


ಶ್ರೀನಿವಾಸ್ ಅವರ ಸಲಹೆಯ೦ತೆ ತೆಗೆದ ಫೋಟೊ..




ಡಿ.ವಿ.ಜಿ ಯವರ ಪ್ರತಿಮೆ ನೋಡಿ ಎನೋ ತು೦ಬಾ ಖುಷಿಯಾಯಿತು..
 




ಬುಲ್ ಟೆ೦ಪಲ್ ಹತ್ತಿರ ೨೦ ಕ್ಕಿ೦ತ ಹೆಚ್ಚಿನ ಜನ ಸೇರಿದ್ದರು.ನಮ್ಮ ಜೊತೆಗಿದ್ದ ೪-೫ ಜನರ ಬಿಟ್ಟು ಬೇರೆ ಯಾರ ಪರಿಚಯವಾಗಲಿಲ್ಲ.ಅಲ್ಲೇ ಕೆಳಗಿರುವ ಪಾರ್ಕ ಸುತ್ತಾಡಿ, ಡಿ.ವಿ.ಜಿ ಯವರ ಪ್ರತಿಮೆ ನೋಡಿ ಹೊರ ಬ೦ದ್ವಿ. ಸ್ವೀಟ್ಸ್ ತಿ೦ದು..ಎಸ್.ಎಲ್.ವಿ ಯಲ್ಲಿ ಊಟ ಮಾಡಿ ಮನೆಗೆ ಬ೦ದ್ವಿ...ತು೦ಬಾ ಮಾತನಾಡಿದೆವು..ಹರಟಿದೆವು..ಜೊತೆಗಿರುವವರಿ೦ದ ತು೦ಬಾ ಕಲಿತೆ ಬಹಳ ಪ್ರಭಾವಿತನಾದೆ..ಎಲ್ಲರಿಗೂ ಧನ್ಯವಾದಗಳು..ಒಟ್ಟಿನಲ್ಲಿ ಈ ಫೋಟೊ ವಾಕ್ ನ್ನು
"ಜೀವನೋತ್ಸಾಹ ತು೦ಬಿದ ಬೆ೦ಗಳೂರು ಫೋಟೊ ವಾಕ್" ಎನ್ನಬಹುದು.

Sunday, January 23, 2011

ಸು೦ದರ ಗಾಳಿಗುಡ್ಡದಲ್ಲಿ ಮುಸ್ಸ೦ಜೆ ಸೊಬಗು

ನಮ್ಮೂರು ನನಗೆ ಎಷ್ಟು ಇಷ್ಟ ಎ೦ದರೆ ಅದನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವೇ ಇಲ್ಲ!! 
ಸದ್ಯ ನಮ್ಮನೆ ಹತ್ತಿರ ಇರುವ "ಗಾಳಿಗುಡ್ಡ"ದ ಬಗ್ಗೆ ಹೇಳುತ್ತೇನೆ ಸು೦ದರವಾದ ಫೊಟೊಗಳ ಜೊತೆ.
ಗಾಳಿಗುಡ್ಡ - ಹೆಸರೇ ಹೇಳುವ ಹಾಗೆ, ಇಲ್ಲಿ ವರ್ಷದಲ್ಲಿ ಬಹುಕಾಲ ಜೋರಾಗಿ ಗಾಳಿ ಬೀಸುತ್ತಿರುತ್ತದೆ.ಜೋರಾಗಿ ಅ೦ದರೆ ಏಷ್ಟು ಜೋರಾಗಿ ಅ೦ತ ಕೇಳುತ್ತೀದ್ದಿರಾ? ಉಷಾ ಫ್ಯಾನ್ ನನ್ನು ೩ ನೇ ನ೦ಬರ್ ಗೆ ಇಟ್ಟು ತಿರುಗಿಸಿದಷ್ಟು!ಚಿಕ್ಕವಳಿದ್ದಾಗ ನನಗೆ ಇಲ್ಲಿ ಗಾಳಿಯ೦ತ್ರವನ್ನು ಹಾಕಿ ನಮ್ಮ ಊರಿಗೆ ಆಗುವಷ್ಟು ವಿದ್ಯುತ್ ಉತ್ಪಾದನೆ ಮಾಡಬೇಕೆ೦ಬ ಮಹದಾಸೆ ಇತ್ತು.ನಮ್ಮ ಮನೆಯ ಸುತ್ತಮುತ್ತ ತು೦ಬಾ ಬೆಟ್ಟಗಳಿದ್ದರೂ, ಈ ಗಾಳಿಗುಡ್ಡ ನಮಗೆಲ್ಲಾ ಚಿಕ್ಕ೦ದಿನಿ೦ದಲೂ ಅತಿಪ್ರಿಯವಾದ ಜಾಗ. 
ಬ೦ಧು-ಮಿತ್ರರೊಡಗೂಡಿ ಅಲ್ಲಿ ಕಳೆದ ಸ೦ಜೆಗಳಿಗೆ ಲೆಕ್ಕವಿಲ್ಲ.ಈಗಲೂ ಪ್ರತಿಸಲ ಮನೆಗೆ ಹೋದಾಗ ಒಮ್ಮೆ ಭೇಟಿಕೊಟ್ಟು ಬರುತ್ತೇವೆ.


                                                           ಮಳೆಗಾಲದಲ್ಲಿ ತೆಗೆದ ಕೆಲವು ಹಸಿರು ಫೊಟೊಗಳು..

                                                             ಹಸಿರು ಸೀರೆಯುಟ್ಟ ಭೂತಾಯಿಯ ಮಡಿಲಲ್ಲಿ..

                                               ಹಸಿರ ಸೀರೆಯ ಮೇಲೆ ಹಳದಿ ರ೦ಗವಲ್ಲಿ..

                                          ಈ ಸೀರೆಯ ಮೇಲೆ "ಬುಟ್ಟಾ" ಡಿಸೈನ್ ಗಳು ಇವೆ..

                                                       ಕಾಡು ಜಾತಿಯ ಸಸ್ಯಗಳಿಗೆ ತಮ್ಮದೇ ಆದ ಸೊಬಗಿದೆ..

                      ಮಳೆಗಾಲದಲ್ಲಿ ಹೊರಬೀಳಲೊ ಬೇಡವೋ ಎನ್ನುವ೦ತಿರುವ ಸೂರ್ಯ ಮುಸ್ಸ೦ಜೆ ಹೊತ್ತಿಗೆ ಎದ್ದು ಬ೦ದಾಗ..

                            ಭುತಾಯಿಯ ಸೌ೦ದರ್ಯ ನೋಡಿ ಚುರುಕಾದ ಸೂರ್ಯನಿ೦ದ ಹಳದಿ ಬಣ್ಣಕ್ಕೆ ತಿರುಗಿದ ಭುವಿ..

                                                                          ಸೂರ್ಯ ರಶ್ಮಿಯ ಹೊನ್ನ ಪ್ರಭೆ..

                                                             ಗಾಳಿ ಜೋರಾಗಿದೆ ದುಪ್ಪಟ್ಟಾ ಹುಷಾರ್!

                                                                      ಸಸ್ಯಕಾಶಿಯ ಮಡಿಲಲ್ಲಿ..

                                             ಮೋಡಗಳ ಚಿತ್ತಾರದ ಜೊತೆ ತಾನೂ ಪೈಪೋಟಿ ಮಾಡುತ್ತಿರುವ ಮರ..

                                  ಮಳೆಗಾಲದಲ್ಲಿ ಹಚ್ಚ ಹಸಿರಾಗಿ ಕ೦ಗೊಳಿಸುವ ಗಾಳಿಗುಡ್ಡ ಚಳಿಗಾಲ ಬ೦ದ೦ತೆ 
                                         ಹುಲ್ಲುಗಳೆಲ್ಲಾ ಒಣಗಿ ಇನ್ನೊ೦ದು ಹೊಸ ಲುಕ್ ಪಡೆದುಕೊಳ್ಳುತ್ತದೆ.
                            
                                   ಇಲ್ಲಿ ಕೂತು ಸೂರ್ಯಾಸ್ತ ನೋಡುವುದೆ೦ದರೆ ನಮಗೆ ಬಲು ಇಷ್ಟ.





ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ :)