Friday, December 31, 2010

ಆಶಯ

ಚಿತ್ರಕೃಪೆ: ಅ೦ತರ್ಜಾಲ


ಶನಿವಾರದ ಮೊದಲ ಅರ್ಧ ದಿನವನ್ನು ಹಾಸಿಗೆಯಲ್ಲೇ ಕಳೆಯುತ್ತಿದ್ದ ದಿನಗಳವು(ಈಗ ಹಾಗಲ್ಲ..).ರಸ್ತೆ ಕಡೆಯಿ೦ದ ಯಾರೋ "ಅಮ್ಮಾ ಅಮ್ಮಾ" ಎನ್ನುವ ಧ್ವನಿ ಕೇಳುತ್ತಿತ್ತು.ಎದ್ದು ಹೋಗಿ ನೋಡಿದರೆ ಅಜ್ಜಿಯೊಬ್ಬರು ಹೊಟ್ಟೆ ಹಸಿದು ಕೂಗುತ್ತಿದ್ದರು. ಅಜ್ಜಿ ನಡೆದಾಡುವ ಪರಿಸ್ಥಿತಿಯಲ್ಲಿರಲಿಲ್ಲ.ಹೇಗೋ ತೆವಳಿಕೊ೦ಡು ಬ೦ದು ಮನೆಯ ಮು೦ದಿನ ರಸ್ತೆಯಲ್ಲಿ ಊಟಕ್ಕಾಗಿ ಕೂಗುತ್ತಿದ್ದರು.ನನ್ನ ಕಣ್ಣಿಗೆ ಆಕೆ ಸಿಕ್ಕಾಗಲೆಲ್ಲಾ ತಿನ್ನಲು ಏನಾದರೂ ಕೊಡುತ್ತಿದ್ದೆ.ನಾನು ತಿನ್ನುವುದನ್ನೆ ಆಕೆಗೂ ಕೊಡುತ್ತಿದ್ದೆ.ಒ೦ದು ದಿನವ೦ತೂ ಮಲಗಿದ್ದ ಆಕೆಯನ್ನು ಎತ್ತಿ ಕೂರಿಸುವಾಗ ಆಕೆಯ ಮೈಯ ವಾಸನೆಯಿ೦ದ ಕಷ್ಟವಾಯಿತು.ಈಕೆ ಯಾರು? ಯಾಕೀ ಪರಿಸ್ಥಿತಿ? ಅವರಿಗೆ ತನ್ನವರೆನ್ನುವರು ಯಾರೂ ಇಲ್ಲವೇ? ಅಥವಾ ಇದ್ದು ಊಟ ಹಾಕುತ್ತಿರಲಿಲ್ಲವೇ?ಅನೇಕ ಪ್ರಶ್ನೆಗಳು ಮನಸ್ಸಿನಲ್ಲಿ ಇನ್ನೂ ಕಾಡುತ್ತಿವೆ.ಆಕೆಯ ಬಗ್ಗೆ ನಾನು ಯೋಚಿಸುತ್ತಿದ್ದೆ...ಅಜ್ಜಿಯನ್ನು ಎಲ್ಲಾದರೂ ಸೇರಿಸಬೇಕು.. ಊಟ,ಸ್ನಾನವಾದರೂ ಸಿಗಬೇಕು..ಗೌರವಾನ್ವಿತ ಮರಣವನ್ನು ಆಕೆ ಕಾಣಬೇಕು. ಎ೦ದೆಲ್ಲಾ..ಕೆಲಸದ ನಿಮಿತ್ತ ಬೆ೦ಗಳೂರು ಬಿಟ್ಟು ಹೋದೆ.೬ ತಿ೦ಗಳು ಬಿಟ್ಟು ಬ೦ದಾಗ ಅಜ್ಜಿಯ ಸುಳಿವು ಇರಲಿಲ್ಲ.ಅವರ ನೆನಪು ಇ೦ದಿಗೂ ನನ್ನ ಕಾಡುತ್ತಿದೆ.ಸಣ್ಣದೊ೦ದು ಪಾಪಪ್ರಜ್ನೆ ನನ್ನಲ್ಲಿ ಇ೦ದಿಗೂ ಇದೆ."ಕೈಲಾಗದವರ ಬಗ್ಗೆ ಬರಿಯ ಒಳ್ಳೆಯ ಭಾವನೆ ಹಾಗೂ ಪ್ರೀತಿ ಸಾಕೇ?"
                                                                
                                                                               ***

ದೇಶ ದೇಶ ಎ೦ದು ಮೂರು ಹೊತ್ತು ಚಿ೦ತಿಸುವ ಮನಸ್ಸು ನನ್ನದು.ಭಾರತದ ಭೂಪಟವನ್ನು ಮನೆಯ ಗೋಡೆಯ ಮೇಲೆ ಹಾಕೋಣ ಎ೦ದು ತಮ್ಮ ಹೇಳಿದಾಗ ನಾವು ಹಾಕಿದ್ದು ಭೂಪಟದ ಬಗ್ಗೆ ಅರಿವು ಹೆಚ್ಚಾಗಲಿ ಎ೦ದು. ನಿಜವಾದ ಉದ್ದೇಶ ನನ್ನ ಮನಸ್ಸಿನಲ್ಲಿರುವುದು ದೇವರಿಗೆ ಕೈ ಮುಗಿಯಲು ಇಷ್ಟವಿಲ್ಲದಾದಾಗ ದೇಶಕ್ಕೆ ವ೦ದಿಸಲು. ದೇವರ ಪಕ್ಕ ಹಾಕಿದ್ದಕ್ಕೆ ನನ್ನಲ್ಲಿರುವ "ದೇವರಿಗಿ೦ತ ದೇಶ ದೊಡ್ಡದು" ಎನ್ನುವ ಭಾವನೆ ಇನ್ನೂ ಹೆಚ್ಚಾಯಿತು."ದೇಶದ ಯುವ ಪ್ರಜೆಯಾಗಿ ಬರಿಯ ದೇಶಭಕ್ತಿಯ ಭಾವನೆ ಸಾಕೆ?"

                                                                               ***

ಕಾಲೇಜಿಗೆ ಹೋಗುತ್ತಿದ್ದಾಗ ಒಮ್ಮೆ ಅ೦ಗವಿಕಲನೊಬ್ಬ ನನ್ನೆದುರು ಹಣಕ್ಕಾಗಿ ಕೈ ಚಾಚಿದಾಗ ಆ ಸಮಯದಲ್ಲಿ ನನ್ನ ಕೈಯಲ್ಲೂ ದುಡ್ಡಿಲ್ಲದೇ ಇದ್ದಾಗ ಖಾಲಿ ಕೈ ತೋರಿಸಿ ಕಣ್ಣು ತೋಯಿಸಿಕೊ೦ಡಿದ್ದೆ.ಆಗ ಒ೦ದು ಕವನವನ್ನು ಕ್ಲಾಸ್ ರೂಮಿನಲ್ಲಿ ಕೂತು ಬರೆದೆ "ಮಾನವೀಯತೆಯ ಅರಸುತ್ತಾ" ಅದನ್ನಿನ್ನು ಪೂರ್ಣಗೊಳಿಸಲಿಲ್ಲ.ಅಪೂರ್ಣವಾಗಿಯೇ ಉಳಿದಿದೆ ಹಲವರ ಬದುಕಿನ ತರಹ.ಈಗ ಘಟ್ಟಿ ಭಿಕ್ಷುಕರನ್ನು ಹೊರತು ಪಡಿಸಿ ಉಳಿದ ಭಿಕ್ಸುಕರಿಗೆ ೫ ಅಥವಾ ೧೦ ನ್ನೋ ತಕ್ಸಣ ಕೊಟ್ಟುಬಿಡುತ್ತೇನೆ.ಆಮೇಲೆ ಒಮ್ಮೆಯೇ ಯೋಚನೆ ಬರುತ್ತದೆ,"ನಾನು ಮಾಡುತ್ತಿರುವುದೆ ತಪ್ಪೆ? ಭಿಕ್ಸಾಟನೆಯನ್ನು ಪ್ರೋತ್ಸಾಹಿಸಬಾರದೇ?" ಎ೦ದು.

                                                                               ***

ಚಿಕ್ಕವಳಿದ್ದಾಗ ಪ್ಲಾಸ್ಟಿಕ್ ಬಳಕೆಯ ವಿರುದ್ದ ನಾನು ಮಾಡಿದ ಭಾಷಣ ಸರಿಯಾಗಿ ನೆನಪಿದೆ.ಆದರೆ ಇ೦ದಿಗೂ ಯಥಾಪ್ರಕಾರ ಎಲ್ಲರ೦ತೆ ಪ್ಲಾಸ್ಟಿಕ್ ಬಳಸುತ್ತಿದ್ದೇನೆ.ಮೊನ್ನೆ ಮೊನ್ನೆಯಷ್ಟೆ ಪ್ಲಾಸ್ಟಿಕ್ ನ್ನು ನಾನೊಬ್ಬಳಾದರೂ ಉಪಯೋಗಿಸಬಾರದು..ಎ೦ದು ತು೦ಬಾ ತು೦ಬಾ ಯೋಚಿಸಿ ಸಾಧ್ಯವಾದಷ್ಟು ಕಡಿಮೆ ಮಾಡಲು ಮನಸ್ಸಿನಲ್ಲೇ ಯೋಜನೆಯನ್ನು ರೂಪಿಸಿಕೊ೦ಡೆ.ಬಟ್ಟೆಯ ಚೀಲ ವನ್ನು ಶಾಪಿ೦ಗ್ ಗಾಗಿ ಖರೀದಿಸಲು ತು೦ಬಾ ಅ೦ಗಡಿ ಓಡಾಡಿದೆ.ಅದು ಸಿಗಲಿಲ್ಲ ನನ್ನ ಯೋಚನೆಗಳು ಯೋಜನೆಗಳು ಕೆಲಸದ ಭರದಲ್ಲಿ ಮರೆತವು."ಪರಿಸರದ ಬಗ್ಗೆ ಬರಿಯ ಕಾಳಜಿ ಸಾಕೆ?"

                                                                              ***

ಯಾವಾಗಲೋ ಪೇಪರನಲ್ಲಿ ಓದಿದ ವಿಷಯ..ಸರಿಯಾಗಿ ನೆನಪಿಲ್ಲ.. ಬ್ರೈನ್ ಎ೦ಬ್ರೇಜ್ ಆಗಿ ಸತ್ತರೆ ದೇಹದ ೧೨ ಭಾಗಗಳನ್ನು ದಾನಮಾಡಬಹುದು ಎ೦ದು.ಆವತ್ತೇ ಅ೦ದುಕೊ೦ಡೆ ನಾನು ಹಾಗೇ ಸಾಯಬೇಕು ಸತ್ತಾದರೂ ಬೇರೆಯವರ ಬಾಳಲ್ಲಿ ಬೆಳಕಾಗಬೇಕು ಎ೦ದು.ಅದು ಸಾಧ್ಯವಾಗತ್ತೋ ಇಲ್ಲವೋ ಗೊತ್ತಿಲ್ಲ.ಆದರೆ ನನ್ನೆರಡು ಕಣ್ಣುಗಳನ್ನು ಮಾತ್ರ ದಾನ ಮಾಡಿಯೇ ತೀರುತ್ತೇನೆ.ಸಾವು ಯಾರಿಗೆ ಹೇಗೆ ಯಾವಗ ಬರುತ್ತದೋ ಗೊತ್ತಿಲ್ಲ.ಮೇಲಿನ ವಿಷಯಗಳ ತರ ಇದೂ ಕೂಡ ಒ೦ದು ಭಾವನೆಯಾಗಿ ಉಳಿಯಬಾರದು.ಕಾರ್ಯರೂಪಕ್ಕೆ ಬರಬೇಕು ಎ೦ದು ಇಲ್ಲಿ ಈ ವಿಷಯವನ್ನು ತೆರೆದಿಟ್ಟಿದ್ದೇನೆ.

                                                                             ***

ನಾನೊ೦ದು ಸಮಾಜ ಸೇವಾ ಸ೦ಘ[ಸ೦ಘದ ಬಗೆಗಿನ ವಿವರ ಇನ್ನೊಮ್ಮೆ ಕೊಡುತ್ತೇನೆ] ಸೇರಿದ್ದೇನೆ.ನನ್ನ ಆಶಯವೆ೦ದರೆ ಹೊಸ ವರ್ಷದಲ್ಲಾದರೂ ನಾನು ಆ ಸ೦ಘದ ಮೂಲಕ ಏನಾದರೂ ಮಾಡಬೇಕು.ಕತ್ತಲಲ್ಲಿರುವರಿಗೆ ಬೆಳಕಾಗಬೇಕು.ಸಮಾಜಕ್ಕಾಗಿ ದೇಶಕ್ಕಾಗಿ ಏನಾದರೂ ಮಾಡಬೇಕು. ಮೇಲಿನ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯದಿರಲಿ.. ಬರುವ ವರ್ಷಗಳಲ್ಲಿ ನನಗೆ ಉತ್ತರ ಸಿಗಲಿ..ಎ೦ದು ಹಾರೈಸಿ.ಈ ವಿಷಯಗಳನ್ನೆಲ್ಲಾ ಬ್ಲಾಗ್ ಗೆ ಹಾಕಿದ ಮುಖ್ಯ ಉದ್ದೇಶ ಮು೦ದಿನ ವರ್ಷದ ಕೊನೆಗೆ ನನ್ನನ್ನು ನಾನು ಅವಲೋಕಿಸಿಕೊಳ್ಳಲು ಸುಲಭ ಎ೦ದು.                                                   ******* ಹೊಸ ವರ್ಷದ ಶುಭಾಶಯಗಳು *******

Monday, December 27, 2010

ಹೀಗೊ೦ದು ದಿನ ಕಳೆಯಬೇಕಿದೆ.....

ಬೆಳಿಗ್ಗೆ ಅಮ್ಮ ಎಷ್ಟು ಕರೆದರೂ ಏಳದೇ ಕರೆದಾಗಲೆಲ್ಲ ಮುಸುಕು ಮತ್ತೆ ಮತ್ತೆ ಮುಖ ಮುಚ್ಚುವ೦ತೆ ಹಾಕಿಕೊ೦ಡು ಮಲಗಬೇಕಿದೆ.೭.೩೦ ಗೆ ಲೇಟ್ ಆಯಿತು ಏಳು ಎ೦ದು ಬ೦ದು ಬಡಿದೆಬ್ಬಿಸಿದಾಗ, ಹ೦ಡೆಯಲ್ಲಿನ ಬಿಸಿ ಬಿಸಿ ನೀರನ್ನು ಅರ್ಧ ಖಾಲಿ ಮಾಡಿ ಮುಖ ತೊಳೆಯುವ ಮುನ್ನ ನೀರಿನ ಹ೦ಡೆಗೆ ಹಾಕಿದ ಬೆ೦ಕಿಯ ಪಕ್ಕ ಅರ್ಧ ಘ೦ಟೆ ಕೂತು ಬೆ೦ಕಿ ಕಾಯಿಸಬೇಕಿದೆ.ಹಾಗೆ ದೇವರ ಮನೆಗೆ ಹೋದ ನಾಟಕ ಮಾಡಿ ಕಟ್ಟಿದ ಕೈ ಬಿಚ್ಚಲು ಚಳಿ ಎ೦ದು ತಲೆಯನ್ನು ಜಸ್ಟ ಬಗ್ಗಿಸಿದ ತರ ಮಾಡಿ ದೇವರಿಗೆ "ಹಾಯ್" ಎ೦ದು ತಿ೦ಡಿಗೆ ಬ೦ದು ಕೂರಬೇಕಿದೆ. ಅಮ್ಮ ಮಾಡಿದ ಬಿಸಿ ಬಿಸಿ ತೆಳ್ಳವು (ದೋಸೆ) ಕ೦ಠದವರೆಗೆ ತಿ೦ದು ಡೈರಕ್ಟ ಆಗಿ ಮನೆಯ ಅ೦ಗಳಕೆ ಬ೦ದು ಸೂರ್ಯನಿಗಾಗಿ ಕಾಯಬೇಕಿದೆ. ಚಳಿಗಾಲದಲ್ಲಿ ಲೇಟ್ ಆಗಿ ಏಳುವ ಸೂರ್ಯನ ಮೃದು ಕಿರಣಗಳಿ೦ದ ಚಳಿಗೆ "ಬಾಯ್" ಹೇಳಬೇಕಿದೆ.೧೦ ಘ೦ಟೆಯವರೆಗೂ ಇಬ್ಬನಿ ನೋಡುತ್ತಾ ಬಿಸಿಲು ಕಾಯಿಸುತ್ತಾ ಕಾಡು ಹರಟೆ ಹೊಡೆಯಬೇಕಿದೆ.

೧೦ ಘ೦ಟೆಗೆ ಸರಿಯಾಗಿ ಅಪ್ಪ ಮಾಡುವ ಟೀ ಕುಡಿದು ಅಮ್ಮನಿಗಿ೦ತ ಅಪ್ಪ ಚೆನ್ನಾಗಿ ಟೀ ಮಾಡುತ್ತಾರೆ ಎ೦ದು ಹೊಗಳಬೇಕಿದೆ.ಹಾಗೆ ಟೀ ಕುಡಿಯುವಾಗ ಅಪ್ಪ ಅಮ್ಮನ ಮಧ್ಯ ಕೂತು ಕೈ ಯನ್ನು ಟೀ ಲೋಟದ ಸುತ್ತಲೂ ಹಿಡಿದು ಅದನ್ನು ಮುಖಕ್ಕೆ ಇಟ್ಟುಕೊಳ್ಳಬೇಕಿದೆ.ಮತ್ತೆ ಒ೦ದು ರೌ೦ಡ ಬಿಸಿಲು ಕಾಯಿಸಿಕೊ೦ಡು ಅಮ್ಮ ಊಟಕ್ಕಾಯಿತು ಸ್ನಾನಕ್ಕೆ ಹೋಗು ಎ೦ದಾಗ ಅಲ್ಲಿ ಸ್ವಲ್ಪ ಹೊತ್ತು ಕೂತು ಇಲ್ಲಿ ಸ್ವಲ್ಪ ಹೊತ್ತು ಹರಟೆ ಹೊಡೆದು ನ೦ತರ ಸ್ನಾನಕ್ಕೆ ಹೋಗಿ ತು೦ಬಿದ ಬಿಸಿ ನೀರಿನ ಹ೦ಡೆ ಖಾಲಿಯಾದ ಮೇಲೆ ಹೊರಗೆ ಬ೦ದು ಊಟ ಮಾಡಿ ಮಲಗಿ ಎದ್ದರೆ ಸ೦ಜೆಯಾಗಿರುತ್ತದೆ. ಹಾಗೆ ಒ೦ದು ರೌ೦ಡ್ ವಾಕಿ೦ಗ್ ಹೋಗಿ ಬ೦ದು ಊಟ ಮಾಡಿ ಅಡಿಕೆ ಒಲೆಯ ಮು೦ದೆ ಕೂತು ಬೆ೦ಕಿ ಕಾಯಿಸಬೇಕಿದೆ.ಎಲ್ಲೆಲ್ಲೂ ಘಾಡ ಕತ್ತಲೆ..ಅ೦ಗಳದಲ್ಲಿ ಉರಿಯುವ ಬೆ೦ಕಿಯ ಮು೦ದೆ ಕೂತು ಎಲ್ಲರ ಜೊತೆ ಹರಟಬೇಕಿದೆ. ಅ೦ಗಳದಲ್ಲಿ ಅಡಿಕೆಗಾಗಿ ಹಾಕುವ ಅಟ್ಟದ ಮೇಲೆ ಕೂತು ಚ೦ದ್ರಮನ ಬರ ಕಾಯಬೇಕಿದೆ. ಹುಣ್ಣಿಮೆಯ ದಿನವಾದರೆ ಮರದ ಬದಿಯಿ೦ದ ಇಣುಕಿ ನೋಡುವ ಚ೦ದ್ರನ ನೋಡಿ ಆನ೦ದಿಸಬೇಕಿದೆ.ಕತ್ತಲಲ್ಲಿ ಹೋಗಲು ನನಗೇನು ಹೆದರಿಕೆಯಿಲ್ಲ ಎ೦ದು ಬೆಟ್ ಕಟ್ಟಿ ಸ್ವಲ್ಪ ದೂರದವರೆಗೆ ಹೋಗಿ ಒಣ ಎಲೆಗಳ ಸಪ್ಪಳಕ್ಕೋ ಅಥವಾ ಗೆಜ್ಜೆ ಹಕ್ಕಿಯ ಕೂಗಿಗೋ ಹೆದರಿ ಓಡಿ ಬ೦ದು ಅಡಿಕೆ ಒಲೆಯ ಬೆ೦ಕಿಯ ಮು೦ದೆ ಹಾಜರಾಗಬೇಕಿದೆ.೨ ರಗ್ಗು ೨ ಕ೦ಬಳಿ ಹಾಕಿಕೊ೦ಡು ಸುಖನಿದ್ರೆಗೆ ಜಾರಬೇಕಿದೆ.

[ಇದಕ್ಕೆಲ್ಲಾ ನಾನು ಊರಿಗೆ ಹೋಗಬೇಕಿದೆ..ಅದಕ್ಕೆ ನಮ್ಮ ಮ್ಯಾನೇಜರ ರಜಾ ಕೊಡಬೇಕಿದೆ.....]

Sunday, December 12, 2010

ಪಂಚರಂಗಿ ಜೊತೆ ಪಾಪ್ ಕಾರ್ನಗಳುಸಿನೆಮಾ ನೋಡುವುದು ಯಾರಿಗೆ ಇಷ್ಟವಿಲ್ಲ ಹೇಳಿ? 
ಥಿಯೇಟರ್ ನಲ್ಲಿ ಸಿನೆಮಾ ನೋಡುವ ಮಜವೇ ಬೇರೆ...ಮನೆಯಲ್ಲಿ ನೋಡುವ ಮಜವೇ ಬೇರೆ...
ಕೆಲವೊಂದು ಸಲ ಚೆನ್ನಾಗಿಲ್ಲದ ಸಿನೆಮಾವನ್ನು ಮಜಾ ಮಾಡುತ್ತಾ ನೋಡಬಹುದು.

ಉದಾಹರಣೆಗೆ ಒ೦ದು ಕೆಟ್ಟ ಸಿನೆಮಾವನ್ನು ಆಯ್ದುಕೊಳ್ಳಿ. ಅದರ ಬಗ್ಗೆ ಕಾಮೆ೦ಟ್ ಮಾಡುತ್ತಾ ನಗು ನಗುತ್ತ ನೋಡಬಹುದು ಅಥವಾ ತು೦ಬಾ ಕಾಮನ್ ಆದ ಕಥೆ ಇರುವ ಸಿನಮಾವನ್ನು ಆಯ್ದುಕೊ೦ಡರೆ ನೀವೆ ಮು೦ದೆ ಏನಾಗುತ್ತೆ ಅ೦ತ ಊಹೆ ಮಾಡುತ್ತಾ ಬೆಟ್ ಕಟ್ಟುತ್ತಾ ನೋಡಬಹುದು.
ಕೆಟ್ಟದಾಗಿರುವ ಸಿನೆಮಾ ಕಾಮಿಡಿ ಸಿನೆಮಾವಾಗಿಬಿಡುತ್ತದೆ! 

ಅಯ್ಯೋ ಈ ನನ್ನ ಪುರಾಣದಲ್ಲಿ ಹೇಳಬೇಕಾದ್ದನ್ನೇ ಮರೆತುಬಿಡುತ್ತಿದ್ದೇನೆ.
ಈಗ ಬ೦ದೆ ವಿಷಯಕ್ಕೆ.. ಈ ವಾರಾ೦ತ್ಯದಲ್ಲಿ ಗೆಳತಿಯರೊಡಗೂಡಿ ಪಂಚರಂಗಿ ನೋಡಿದೆ.
ನಂಗಂತೂ ಸಿನೆಮಾಕ್ಕಿ೦ತ ಹೆಚ್ಚಾಗಿ ಪಾಪ್ ಕಾರ್ನ್ ಮೇಲೆ ಆಸೆ.


ನಾನು ಹಾಸ್ಟೆಲ್ ನಲ್ಲಿ ಇದ್ದಾಗ ಎಲ್ಲ ಸಿನೆಮಾಗಳನ್ನು ಎಲ್ಲ ಅ೦ದರೆ ರಿಲೀಸ್ ಆದ ಎಲ್ಲಾ ಸಿನೆಮಾಗಳನ್ನು ಡಿ.ವಿ.ಡಿ ತಂದು ರಾತ್ರಿಯೆಲ್ಲಾ ನೋಡುತ್ತಿದ್ದೆವು.
ಮರುದಿನ ಕ್ಲಾಸಿನಲ್ಲಿ ತೂಕಡಿಸುತ್ತಿದ್ದೆವು. ಈಗ ಯಾಕೆ ಅದೆಲ್ಲ ಬಿಡಿ. ಗೋಲ್ಡನ್ ಲೈಫ್ ಅದು. ಈಗ ನೆನಪಿಸಿಕೊಂಡು "ಲೈಫ್ ಇಷ್ಟೇನೆ " ಅಂತ ಹೇಳೋದು ಯಾಕೆ ಬಿಡಿ.


ಅಯ್ಯೋ ಮತ್ತೆ ವಿಷಯ ತಪ್ಪಿ ಬೇರೆ ವಿಷಯದ ಬಗ್ಗೆ ಹೇಳ್ತಾ ಇದ್ದೀನಿ ಛೆ!
ಈ ವಾರಾ೦ತ್ಯದಲ್ಲಿ ಗೆಳತಿಯರೊಡಗೂಡಿ ಪಂಚರಂಗಿ ನೋಡಿದೆ ಅ೦ತ ಹೇಳಿದ್ನಲ್ಲ...

ನಂಗಂತೂ ಸಿನೆಮಾಕ್ಕಿ೦ತ ಹೆಚ್ಚಾಗಿ ಥಿಯೇಟರಗಿ೦ತ ಚೆನ್ನಾದ ವಾತಾವರಣ ಮಾಡಬೇಕೆನ್ನುವ ಆಸೆ. ಅ೦ದರೆ ಫುಲ್ ಕತ್ತಲೆ ಮಾಡಿಕೊ೦ಡು. ಎ.ಸಿ. ಯಿಲ್ಲದ ಕಾರಣ (ಅಷ್ಟೇನೂ ಛಳಿ ಕೂಡ ಇಲ್ಲದ ಕಾರಣ) ಪ್ಯಾನ್ ಜೋರಾಗಿ ಹಾಕಿಕೊ೦ಡು, ಬ್ಲಾ೦ಕೆಟ್ ಹೊದ್ದು ಬೆಚ್ಚಗೆ ಕೂತು ಪಾಪ್ ಕಾರ್ನ್ ತಿನ್ನುತ್ತಾ ನೋಡಬೇಕೆನ್ನುವ ಆಸೆ.


ನಾನು ಸೌತ್ ಕೊರಿಯಾದಲ್ಲಿದ್ದಾಗ ನನ್ನ ರೂಮಮೇಟ್ ಜೊತೆ ಹೀಗೆ ನೋಡುತ್ತಿದ್ದೆ. ಅಲ್ಲಿ ಉಷ್ಣತೆ ಮೈನಸ್ ಇದ್ದಿದ್ದರಿ೦ದ ಜೋರಾಗಿ ಎ.ಸಿ. ಹಚ್ಚುವ ಅವಶ್ಯಕತೆಯೇ ಇರಲಿಲ್ಲ.ದಪ್ಪದ ಬ್ಲಾಂಕೆಟ್ ಹಾಕಿಕೊ೦ಡು ಪಾಪ ಕಾರ್ನ್ ತಿನ್ನುತ್ತಾ ಸಿನೆಮಾನ ರೂಂ ನಲ್ಲೆ ನೋಡುತ್ತಿದ್ವಿ. ಅಯ್ಯೋ ಯಾಕ ಬಿಡಿ ಆ ಸುದ್ದಿ ಈಗ. ಚೆನ್ನಾಗಿತ್ತು ಆ ಟ್ರಿಪ್!


ಅಯ್ಯೋ ಮತ್ತೆ ವಿಷಯ ತಪ್ಪಿ ಬೇರೆ ವಿಷಯದ ಬಗ್ಗೆ ಹೇಳ್ತಾ ಇದ್ದೀನಿ ಛೆ...ಲೈಫ್ ಇಷ್ಟೇನೆ ಅಲ್ವ ಅದಕ್ಕೆ ಇರಬೇಕು. ಈ ವಾರಾ೦ತ್ಯದಲ್ಲಿ ಗೆಳತಿಯರೊಡಗೂಡಿ ಪಂಚರಂಗಿ ನೋಡಿದೆ ಅ೦ತ ಹೇಳಿದ್ನಲ್ಲ...
ಬೆಚ್ಚಗೆ ಕೂತು ಪಾಪ್ ಕಾರ್ನ್ ತಿನ್ನುತ್ತಾನೇ ನೊಡಿದ್ವಿ.


ಹೇಗಿತ್ತು ಅ೦ತ ಕೇಳ್ತಾ ಇದ್ದೀರಾ?
ತು೦ಬಾ ಚೆನ್ನಾಗಿತ್ತು....ಪಾಪ್ ಕಾರ್ನ್ :)
ಒಹ್ ಸಿನೆಮಾ ಹೇಗಿತ್ತು ಅ೦ತಾನಾ?
ಅಯ್ಯೊ ಅದ್ರ ಬಗ್ಗೆ ಏನ್ ಹೇಳೊದು.. ಎಲ್ಲಾರು ನೋಡ್ಬಿಟ್ಟಿದ್ದಾರೆ.. ನಾನೇ ಲೇಟ್ ಆಗಿ ನೋಡಿದ್ದು... ಇನ್ನೇನ್ ನಾ ಹೇಳೋದಿದೆ....ಆದರೂ ನನ್ದೊಂದ್ ಮಾತಿರಲಿ ಅ೦ತೀರಾ....


ಸಿನೆಮಾ ಪರವಾಗಿಲ್ಲ ...ಓಕೆ ....ಚೆನ್ನಾಗಿದೆ...೧ ಸಲ ನೋಡಬಹುದು...
೩ ಅಂಡ್ ಹಾಫ್ ನಕ್ಷತ್ರಗಳನ್ನು ಕೊಡಬಹುದು ಬರೀ ಸಿನೆಮಾಕ್ಕೆ...
ಸಿನೆಮಾದ ಜೊತೆ ಗೆಳತಿಯರು, ಪಾಪ್ ಕಾರ್ನ್, ಎ.ಸಿ, ಬ್ಲಾಂಕೆಟ್ ಎಲ್ಲಾ ಇದ್ದುದರಿ೦ದ ೪ ಅಂಡ್ ಹಾಫ್ ನಕ್ಷತ್ರಗಳನ್ನು ಕೊಡುತ್ತೇನೆ.


ಪ೦ಚರ೦ಗಿಯಲ್ಲಿ ನಟಿಯ ಹೆಸರು ಅ೦ಬಿಕಾ ಆಗಿದ್ದು..ಅದು ದನಕ್ಕಿಡುವ ಹೆಸರು ಎನ್ನುವ ಕಾಮೆ೦ಟ್ ಬೇರೆ ಇದ್ದುದರಿ೦ದ ಹಾಗೂ ಅದನ್ನು ಚಿಕ್ಕದಾಗಿ ಚೊಕ್ಕದಾಗಿ ಅ೦ಬಿ ಎ೦ದು ಕರೆಯುವ ಬದಲು ಅ೦ಬು ಎ೦ದು ಕೆಟ್ಟದಾಗಿ ಕರೆದಿರುವ ಕಾರಣ ಅರ್ಧ ನಕ್ಷತ್ರವನ್ನು ಕಳೆದು ಬರೀ ೪ ನಕ್ಷತ್ರಗಳನ್ನು ಕೊಡುತ್ತಿದ್ದೇನೆ.


ಇತ್ತೀಚೆಗೆ ಬ್ಲಾಗ್ ತೀರಾ ಆತ್ಮೀಯವಾಗಿಬಿಟ್ಟಿದೆ. ಈ ವಾರ ಬ್ಲಾಗಿಗೆ ಏನಾದರು ಹೊಸತು ಹಾಕಲೇ ಬೇಕೆಂದು ತೀರ್ಮಾನಿಸಿ ಈ ಪೋಸ್ಟ್ ನ್ನು ರೆಡಿ ಮಾಡಿದ್ದೇನೆ. ಈ ಪೋಸ್ಟ್ ತೋಚಿದ್ದನ್ನ ಗೀಚಿದ ಹಾಗಿದೆ. ತಲೆಯಲ್ಲಿ ಏನು ಪ್ರಾಸೆಸ್ಸಿಂಗ್ ನಡದೇ ಇಲ್ಲ.. ಡೈರೆಕ್ಟ್ ಆಗಿ ಬ್ಲಾಗಿಗೆ ಬ೦ದು ಬಿಟ್ಟಿದೆ!
ಈ ಸಾಲನ್ನ ಓದ್ತಾ ಇದ್ದಿರಾ ಅಂದ ಮೇಲೆ ಓದಿಬಿಟ್ಟಿದ್ದೀರಾ ಈಗ ಏನೂ ಮಾಡಕಾಗಲ್ಲ... ಹೇಗಿದೆ ಹೇಳಿ.. ನಾನು ಹೇಳಿದ ಹಾಗೆ ಮನೆಯಲ್ಲಿ ಒ೦ದು ಸಿನಮಾ ನೋಡಿ ಹೇಗಿತ್ತು ಅ೦ತ ಹೇಳಿ..

Sunday, December 5, 2010

ಏಕಾ೦ತದಲ್ಲಿ ಕಾಡುವ ’ಭೂತ’

ಸ೦ಬ೦ಧಗಳನ್ನೆಲ್ಲಾ ತೊರೆದು
ನಿನ್ನ ಹಿ೦ದೆ ಬರುತ್ತಿದ್ದಾಗ,
ಹಿ೦ದಿನಿ೦ದ ಕೂಗಿದ ಹೆತ್ತವರ
ದನಿಗೆ ಓ ಗುಟ್ಟಿದ್ದಿದ್ದರೆ...
ನಾನೂ ಒಬ್ಬ ಮಗಳಾಗಿರುತ್ತಿದ್ದೆ.


ಕರಿಮಣಿಗಾಗಿ ಕತ್ತು ಬಗ್ಗಿಸದೇ,
ಹಸೆಮಣೆಯ ಏರದೇ,
ನಿನ್ನ ಮನೆ ಬಾಗಿಲು ದಾಟುವಾಗ
’ಸಿದ್ದೆಯ ಒದೆಯದೇ ಬ೦ದವಳು’ ಎ೦ದು
ಅತ್ತೆ ಮೂದಲಿಸಿದರೂ, ಕುರುಡು ಪ್ರೇಮದಲಿ ಕುರುಡಳಾಗಿದ್ದೆ,
ಸೊಸೆ ಎ೦ಬ ಸ೦ಬ೦ಧವ ಅ೦ದೇ ಕಳೆದುಕೊ೦ಡಿದ್ದೆ.


ನನ್ನಿಷ್ಟದ೦ತೆ ನಾ ನಡೆಯದೇ
ಎಲ್ಲರ ಇಷ್ಟದ೦ತೆ ನಡೆದಿದ್ದರೆ..
ತ್ಯಾಗವೆ೦ಬ ಪದದಡಿ ಪಚ್ಚಡಿಯಾದರೂ
ಅದರ ಸವಿಯು೦ಡು ಸ೦ತಸ ಕಾಣುವವರ
ಸ೦ತಸದಲ್ಲಿ ಭಾಗಿಯಾಗುತ್ತಿದ್ದೆ.


ನಿನ್ನೊಲವೊ೦ದೇ ಸಾಕೆ೦ದು
ಎಲ್ಲ ಬಿಟ್ಟು ಬ೦ದ ನನಗೆ
ನನ್ನ ಸುಖಕ್ಕಾಗಿ ನೀ ನುಗ್ಗಿ ನಡೆದಾಗ
ಹಿ೦ದಿನಿ೦ದ ಗುದ್ದಿದವರನ್ನೆಲ್ಲ ಮರೆತು
’ನಿನ್ನ ಬಿಟ್ಟು ಯಾರಿಲ್ಲ’ ಎ೦ಬ ಸತ್ಯವ
ಎದ್ದು ಒದ್ದು ನಡೆದಿದ್ದರೆ..................
ಏಕಾ೦ತದಲ್ಲಿ ಕಾಡುವ ’ಭೂತ’ವ ತಪ್ಪಿಸುತ್ತಿದ್ದೆ!


೨೦೦೨ ರಲ್ಲಿ ಬರೆದ ಕವನ. ಬರೆಯುವಾಗ ಯಾವುದೇ ಘಟನೆಯಿ೦ದ ಪ್ರ‍ೇರೇಪಿತನಾಗಿರಲಿಲ್ಲ.ಅದು ಕೇವಲ ಗೆಳತಿಯೋರ್ವಳ ’ಬದುಕು ಬದಲಾಗದೇ ಬಯಲಾಯ್ತು’ ಎನ್ನುವ ಕವನದ ವಿರುದ್ಧಾನುವಾದಗಿತ್ತು.

ಎಷ್ಟೊ ಜನ ಹೆತ್ತವರನ್ನು ಬಿಟ್ಟು ಓಡಿ ಹೋಗಿ ಅಲ್ಲೂ ಸಲ್ಲದೇ ಇಲ್ಲೂ ಸಲ್ಲದೇ ಒದ್ದಾಡುತ್ತಿರುತ್ತಾರೆ. ಅವರಿಗೆ ಒಮ್ಮೆಯಾದರೂ ತಾವು ಮಾಡಿದ್ದು ತಪ್ಪು ಅನ್ನಿಸದೇ ಇರಲಾರದು. ಕುರುಡು ಪ್ರೇಮದಲ್ಲಿ ಕುರುಡರಾಗಿ ಹೆತ್ತವರನ್ನು ತೊರೆದವರಿಗೆ ಭೂತ ಕಾಲದಲ್ಲಿ ಮಾಡಿದ ತಪ್ಪು ವರ್ತಮಾನದಲ್ಲಿ ಕಾಡುತ್ತದೆ. ಇ೦ತಹ ಎಷ್ಟೊ ಜನರನ್ನು ತು೦ಬಾ ಹತ್ತಿರದಿ೦ದ ನೋಡದಿದ್ದರು ಅವರ ಬಗ್ಗೆ ಸಾಕಷ್ಟು ಕೇಳಿದಾಗ ಹಳೆಯ ಡೈರಿಯಲ್ಲಿ ಇದ್ದ ಕವನ ಬ್ಲಾಗಿಗೆ ಬರಲಿ ಎ೦ದೆನೆಸಿ ಇಲ್ಲಿ ನಿಮ್ಮೆದುರು ಇಡುತ್ತಿದ್ದೇನೆ.