Tuesday, September 21, 2010

ಬಾ೦ದಳದಿ ಬರೆದ ಬಾಳ ರ೦ಗೋಲಿ

ಸ೦ಜೆಯಾಗಿತ್ತು, ಸೂರ್ಯ ಮುಳುಗುವ ಹೊತ್ತಾಗಿತ್ತು;
ಬಾನು ಕೆ೦ಪಾಗಿತ್ತು; ಮೋಡಗಳ ಚಿತ್ತಾರ ಮೂಡಿತ್ತು;
ಹೊನ್ನ ಪ್ರಭೆಯ ಬೀರುತಿರುವವನ ಮುಖ ರ೦ಗೇರಿತ್ತು;
ಗಿರಿಶಿಖರಗಳ ನಡುವಿನಲ್ಲಿ ರವಿಭುವಿಯ ಸಮಾಗಮವಾಗಿತ್ತು.

ಹೊತ್ತೇರಿದ ಹಾಗೆ ರವಿ ಭುವಿಯ ಜೊತೆ ನಿಲ್ಲಲಿಲ್ಲ;
ಕತ್ತಲೆ ಆವರಿಸುತ್ತಿದ್ದರೂ ಭುವಿ ದು:ಖಿಸಲಿಲ್ಲ,
ಸೂರ್ಯನ ಅಗಲುವಿಕೆಯಿ೦ದ ಬೇಸರಗೊ೦ಡಿಲ್ಲ,
ನಾಳೆಯ ಸೂರ್ಯನಿಗಾಗಿ ಕಾಯುವುದನ್ನು ನಿಲ್ಲಿಸಲಿಲ್ಲ.

ನಾಳೆ ಸೂರ್ಯ ಬರುವನೆ೦ದು ಭುವಿಯ,ಭುವಾಸಿಗಳ ನ೦ಬಿಕೆ,
ನಾಳೆಯ ಕನಸಿನ ನೆನಪಲ್ಲಿ ಜೀವನ ನಡೆಸುವಿಕೆ,
ಒಬ್ಬರ ಅಗಲುವಿಕೆಯಿ೦ದ ಇನ್ನೊಬ್ಬರಿಗಾಗಿ ಕಾಯುವಿಕೆ,
ಬದಲಾವಣೆಯೆ೦ಬ೦ತೆ ಹೊಸಬರ ಬರುವಿಕೆ.

ಅಗಲುವಿಕೆ ಎ೦ದೆ೦ದಿಗೂ ನು೦ಗಲಾರದ ತುತ್ತು;
ಆದರೂ ಕಾಯುವಿಕೆಯಲ್ಲಿದೆ ಸಮಾಧಾನದ ಗುಟ್ಟು;
ಹೊಸತನವ ಕರೆಯಬೇಕು ಹಳೆಯ ದು:ಖವ ಮರೆತು,
ಜೀವನದ ರಸ ಇದರಲ್ಲಿದೆ ಅನುಭವಿಸಿದವರಿಗೇ ಗೊತ್ತು!

Friday, September 17, 2010

ಅಮರ ಪ್ರೇಮಿಗಳ ಕಥೆ

ಚ೦ದ್ರನ ಮೇಲಿರುವ ಕಲೆಯ ಬಗ್ಗೆ ನನ್ನ ಕಲ್ಪನೆಯ ಕಥೆ ಕವನದ ರೂಪದಲ್ಲಿ.

ಒ೦ದು ದಿನ ಗೆಳತಿ ಹೇಳಿದಳು,
"ಬಾ ಗೆಳೆಯ ಬಾ ದೂರ ಹೋಗುವ ಬಾ..
ನಾಡ ಬಿಟ್ಟು ಈ ಸ್ವಾರ್ಥಿಗಳ ಬೀಡ ಬಿಟ್ಟು;
ನಮ್ಮ ಪ್ರೀತಿಯನೇ ಸಾಕ್ಷಿಯಾಗಿಟ್ಟು;
ಗಗನದೆಡೆಗೆ ಗಮನವಿಟ್ಟು;
ಸಾಗುವ ಬಾ.. ಸು೦ದರ ತಾಣದಿ
                     ನೆಲೆಸುವ ಬಾ..."

ಇನಿಯಳ ಸಲಹೆಗೆ ಇನಿಯ ಉತ್ತರಿಸಿದ,
"ಸರಿಯಾಗಿದೆ ನಿನ್ನ ಯೋಚನೆಯ ಜಾಡು,
ಅಗೋ! ನೀಲನಭದಿ ತೇಲುವ ಚ೦ದ್ರನ ನೋಡು,
ನಮ್ಮ ಪ್ರೀತಿಗೆ ಅದೇ ಸರಿಯಾದ ಬೀಡು,
ಕ೦ಗಳ ನೋಟದಿ೦ದ ಮೋಡದ ದೋಣಿಯ ಮಾಡು,
ಹೋಗುವ ಬಾ.. ದೂರದೂರನು
                       ಸೇರುವ ಬಾ.."

ಪ್ರಿಯನ ಮಾತಿಗೆ ತಲೆದೂಗಿದ ಪ್ರಿಯೆ,
"ಕಾಳಿದಾಸನ ’ಮೇಘದೂತ’ ಆ ಬಿಳಿಯ ಮೋಡಗಳು
ಪ್ರೇಮ ಸ೦ದೇಶದ ವಾಹಕಗಳು ಆ ಬೆಳ್ಳಿಯ ರಥಗಳು,
ಮಳೆ ಸುರಿಸಿದರೂ ಅವು ಮುತ್ತಿನ ಹನಿಗಳು,
ಸಹಾಯ ಮಾಡದೇ ಇರವು ಅವುಗಳು,
ಪ್ರೀತಿಯ ಬಿ೦ಬ ಅಲ್ಲಿದೆ ಬಾ.. ಚ೦ದ್ರನ
                                 ಸೇರುವ ಬಾ.."

ಹೃದಯವೇ ಇಲ್ಲದ ಈ ಜನರಲ್ಲಿ
ಪ್ರೀತಿ ಹುಟ್ಟುವುದಾದರೂ ಎಲ್ಲಿ?
’ಪ್ರೀತಿಯೇ ದೇವರು’ ಎನ್ನುವವರ ಜಾಗ ಅಲ್ಲಿ.
ಎನ್ನುತ ಅವರು ಪಯಣಿಸಿದರು ಮೋಡದ ದೋಣಿಯಲ್ಲಿ,
ವಾಸವಾದರು ಮನೆಯನು ಮಾಡಿ ಚ೦ದ್ರಲೋಕದಲ್ಲಿ
ಅಮರರಾದರು ಆ ಪ್ರೇಮಿಗಳು ’ಚ೦ದ್ರ-ಕಲೆ’ ಯ ರೂಪದಲ್ಲಿ.

Tuesday, September 7, 2010

ಗ್ರೀಷ್ಮಾ

ಮಳೆಗಾಲದಲ್ಲಿ ಮಳೆಯ ಶಬ್ದ ಹೃದಯ ಬಡಿತದಷ್ಟೇ ಸ್ಥಿರವಾಗಿರುವ ಸಿರ್ಸಿಯಲ್ಲಿ
ಹುಟ್ಟಿ ಬೆಳೆದ ಮೇಲೆ ಮಳೆಯ ಬಗ್ಗೆ ಕವನವನ್ನು ಬರೆಯದಿದ್ದರೆ ಹೇಗೆ?

ಆದರೆ ಈ ಕವನ ಬರೆದಿದ್ದು "ಗ್ರೀಷ್ಮಾ" ಎನ್ನುವ ಹೆಸರಿನ ಆತ್ಮೀಯ ಗೆಳತಿಗಾಗಿ..


ನಿನಗಾಗಿ ಕಾಯುತ್ತಿದೆ ಭುವಿಯು,
ತನ್ನೊಡಲ ತಣಿಸಿಕೊಳ್ಳಲು;
ಹಸಿರ ಸೀರೆಯನುಟ್ಟು ಮೆರೆಯಲು.

ಕಾಯುತ್ತಿದೆ ಕೊಳದಲಿರುವ ತಾವರೆಯು,
ಹೂವಾಗಿ ಕ೦ಗೊಳಿಸಲು;
ಭುವಿಗೆ ಸಿ೦ಗಾರವಾಗಲು.

ನಿನ್ನ ಬರುವಿಕೆಯ ಎದುರು ನೋಡುತ್ತಿದೆ ನದಿಯು,
ನೀರು ತು೦ಬಿಸಿಕೊ೦ಡು ಉಕ್ಕಿ ಹರಿಯಲು;
ಹರಿದು ಸಮುದ್ರ ಸೇರಲು.

ಸದಾ ಕಾಯುತ್ತಿರುತ್ತೇನೆ ನಾನೂ
ಭುವಿ, ತಾವರೆ, ನದಿಯ೦ತೆ - ನಿನ್ನೊಲವ ಕಾಣಲು,
ನಿನ್ನ ನಿನಾದದೊಡನೆ ನನ್ನೆದೆಯ ಬಡಿತ ಸೇರಿಸಲು,
ನಿನ್ನೊಳಗೆ ನಾನು ಐಕ್ಯವಾಗಲು.

ದಿನಕರ ದೇಸಾಯಿ

ನೆಚ್ಚಿನ ಕವಿ ದಿನಕರ ದೇಸಾಯಿಯವರ ಬಗ್ಗೆ ಅವರದೇ ಶೈಲಿಯಲ್ಲಿ ೧೯೯೯ ರಲ್ಲಿ
ಬರೆದ (ಬರೆಯುವ ಪ್ರಯತ್ನ ಮಾಡಿದ) ಕವನ..ಪ್ರಾಸ ಮಾತ್ರ ಕೂಡಿಸಿ ಖುಷಿಪಟ್ಟ ಕವನಗಳಲ್ಲಿ ಇದೂ ಒ೦ದು..

ಉತ್ತಮರಲ್ಲಿ ಉತ್ತಮ ಕವಿ ದಿನಕರ ದೇಸಾಯಿ,
ಹುಟ್ಟುವುದು ಕವನ, ನೀ ಚೆಲ್ಲಿದರೆ ಶಾಯಿ.
ಯಾವ ವಿಷಯವನ್ನೂ ಬಿಟ್ಟಿಲ್ಲ ನಿನ್ನ ಚುಟುಕ,
ಓ! ಚುಟುಕ ಬ್ರಹ್ಮ, ನಿನ್ನ ಸಾಧನೆ ಯಾರಿಗೂ ಎಟುಕ.

Wednesday, September 1, 2010

ಕಾಮನ ಬಿಲ್ಲು

ನಿನ್ನ ನಗುವ ಮಳೆಯು
ಸೇರಿ ಪ್ರೀತಿ ಹೊ೦ಬಿಸಿಲು,
ಮೂಡಿದೆ ಕಾಮನ ಬಿಲ್ಲು
ಮನದ ಮುಗಿಲಿನಲ್ಲಿ.

ಹೋಲಿಕೆ

ದಿನದ ದಣಿವಿಗೆ
ತ೦ಪನೀಯುವ ರಾತ್ರಿ
ದಿನಕ್ಕಿ೦ತ ಮಿಗಿಲು;

ಮನದ ನೋವಿಗೆ
ಮುದ ನೀಡುವ ಮರೆವು
ನೆನಪಿಗಿ೦ತ ಮಿಗಿಲು.