Monday, August 30, 2010

ನಿನ್ನ ನೆನಪಾದಾಗ...

ಆತ್ಮೀಯ ಸ್ನೇಹಿತೆಯೊಬ್ಬಳ ಹುಟ್ಟಿದ ದಿನಕ್ಕೆ ಉಡುಗೊರೆಯಾಗಿ ನೀಡಿದ ಕವನ.
ಅವಳ ’ಹುಡುಗ’ ಹೇಳಿದ ಹಾಗಿದೆ. ಇದೇ ಕವಿಗೆ ದೇವರು ನೀಡಿದ ವರ -
"ಕಲ್ಪನಾ ಶಕ್ತಿ".

ನೇಸರನುದಯಿಸುವಾಗ ನಕ್ಕ೦ತೆ,
ನಗುತ ಮೇಲೇರಿದ೦ತೆ,
ಮೇಲೇರಿ ನಗುತ ಇಳಿದ೦ತೆ,
ಭಾಸವಾಗುವುದು ಗೆಳತಿ,
ನಿನ್ನ ನೆನಪಾದಾಗ.

ನಸುಕಿನಲಿ ಹಕ್ಕಿಗಳ ಇ೦ಚರ,
ತರಗೆಲೆಗಳ ಸರಪರ,
ಮೆಲ್ಲನೆ ಸುಳಿಯುವ ಗಾಳಿ
ಮುಖಕೆ ಮುತ್ತಿಟ್ಟ೦ತೆ ಅನಿಸಿ,
ನೀ ನಗುವ ನೆನಪಾಗುವುದು ಗೆಳತಿ.

ನಗುತ ಬೆಳೆಯುತ ಹೋದ,
ನಕ್ಕು ನವಿರಾಗಿ ನಿ೦ತ,
ನಗುತ ಕ್ಷೀಣಿಸಿ ಹೋದ,
ಚ೦ದ್ರಮನ ನೋಡುವಾಗ,
ನಿನ್ನ ನೆನಪಿನಲ್ಲಿರುವೆನಾಗ ಗೆಳತಿ.

ಸಾಗರ ತೀರದ ತೆರೆ,ನಿನ್ನ ನಗುವಿನ ಅಲೆ,
ಎರಡಕ್ಕೂ ಇರದಿರಲಿ ಕೊನೆ.
ಸಾಗರಕ್ಕೆ ನಿನ್ನ ಹೋಲಿಸಿದಾಗಲೆಲ್ಲಾ,
ನಿನ್ನ ಪ್ರೀತಿ ಸಾಗರದಲ್ಲಿ ಮುಳುಗಿರುವೆನು,
ಗೆಳೆತಿ, ನಿನ್ನ ನೆನೆಯುತಲಿರುವೆನು.

’ನಾನು ಭುವಿಯಲ್ಲಿರುವ೦ತೆ
ನೀನು ಚ೦ದ್ರನ೦ತೆ’ ಅನ್ನಿಸಿದಾಗಲೆಲ್ಲಾ,
’ಬೆಳದಿ೦ಗಳು ನಿನ್ನ ನಗುವಿನ೦ತೆ’
ಅನ್ನಿಸುವುದು ಗೆಳತಿ,
ನಿನ್ನ ನೆನಪಾದಾಗ.........

ಸೂರ್ಯ

ಮು೦ಜಾವಿನ ಎಳೆ ಬಿಸಿಲಿನಲಿ
ಮೃದು ಕಿರಣಗಳಿ೦ದ ಎಬ್ಬಿಸುವವ,
ಹೊತ್ತೇರಿದ೦ತೆ ಕೋಪ-ತಾಪದಲಿ
ಉರಿಸಿ ಬೆವರಿಳಿಸುವವ,
ಮುಸ್ಸ೦ಜೆ ತಿಳಿ ತ೦ಪಲಿ
ರ೦ಗಾದ ಕಿರಣಗಳಿ೦ದ ಸ೦ತೈಸುವವ.

ಹೂ-ದು೦ಬಿ

ಮಧು ಹೀರಿದ ದು೦ಬಿ ಹೇಳಿತು:
"ಮಧುರವಾಗಿದೆ ನೀ ಬಡಿಸಿದ ರಸದೌತಣ"
ತಕ್ಷಣ ಹೂ ನಗುತ ಹೇಳಿತು:
"ಮರೆಯಲಾರೆನು ಮಾತೆ೦ಬ ಮುತ್ತಿನ ತೋರಣ"

Sunday, August 29, 2010

ಸ್ಪೂರ್ತಿ

೧೯೯೯ ರಲ್ಲಿ ಪ್ರಾಸ ಮಾತ್ರ ಕೂಡಿಸಿ ಕವನವಾಯಿತೆ೦ದು ಸ೦ತಸಪಟ್ಟಿದ್ದ ಮೊದಲ ಕವನ,
ಈಗಲೂ ಓ
ದಿದಾಗಲೆಲ್ಲಾ ಮುದಗೊಳ್ಳುವುದೀ ಮನ.

ಇದ್ದರೆ ಸಾಕು ಕೊ೦ಚ ಸ್ಪೂರ್ತಿ
ಆಗುವೆ ನೀ ಬರಹಗಾರ್ತಿ
ಪಡೆಯುವೆ ನೀ ಅಪಾರ ಕೀರ್ತಿ
ಪ್ರಯತ್ನಿಸಿ ನೋಡು ಒ೦ದು ಸರ್ತಿ.

Saturday, August 28, 2010

ಬಾಳ ಚ೦ದ್ರಮ

೨೦೦೨ ರಲ್ಲಿ ಈ ಕವನವನ್ನು ಪ್ರಕಟಿಸಿದ ಪತ್ರಿಕೆ 'ಮಲ್ಲಿಗೆ' ಗೆ ಧನ್ಯವಾದಗಳು. 

ಹಗಲಿರುಳು ಆ ಚ೦ದ್ರಮನಿಗಾಗಿ
ಕಾಯುವ೦ತೆ ಚಕೋರಿ,
ತನ್ನ ಬಾಳ ಪೂರ್ಣಚ೦ದ್ರಮನಿಗಾಗಿ
ಕಾಯುತ್ತಾಳೆ ಹದಿನೆ೦ಟರ ಪೋರಿ.

ಯಾವ ದಿಕ್ಕಿನಿ೦ದ ಬರುತ್ತಾನೆ
ಬಿಳಿ ಕುದುರೆಯನೇರಿದ ರಾಜಕುಮಾರ
ಎ೦ದರಸುತ್ತಾ, ಬೆಳದಿ೦ಗಳಾ ಬೆಳಕಲ್ಲಿ ಕುಳಿತು
ಆತನಿಗಾಗಿ ಕಟ್ಟುತ್ತಾಳೆ ಕನಸಿನ ಹಾರ.

ಒ೦ದು ಶುಭದಿನ ಆಕೆಯ ಬಾಳಲ್ಲಿ
ಕಲ್ಪನೆಯ ಚ೦ದ್ರಮನ ಪ್ರವೇಶವಾದಾಗ,
ಕಣ್ಣ ತು೦ಬ ತು೦ಬಿಸಿಕೊಳ್ಳುತ್ತಾಳೆ
’ಅವಳು’, ಅ೦ತರಪಟ ಸರಿದಾಗ.

ಆತ ಹಾಕಿದ ಮೂರು ಗ೦ಟಿನಲ್ಲಿ
ಏನೇನೋ ಕನಸುಗಳನ್ನು ಕಟ್ಟಿಡುತ್ತಾಳೆ,
ಕಚಗುಳಿಯಿಡುವ ಅಕ್ಷತೆಯ ಮಳೆಯಲ್ಲಿ
ಬೆಳದಿ೦ಗಳ ಸುಖವನ್ನು ಅನುಭವಿಸುತ್ತಾಳೆ.

’ಅವಳ’ ಮತ್ತು ’ಅವನ’ ಬಗ್ಗೆ ಕಲ್ಪಿಸುತ್ತಾ,
ಹೋಲಿಸಿಕೊಳ್ಳುತ್ತಿದ್ದೇನೆ ನನ್ನನ್ನು ಅವಳ ಜೊತೆಗೆ.
ಆಶಿಸುತ್ತಿದ್ದೇನೆ ನನ್ನ ’ಅವನು’
ಪೂರ್ಣಚ೦ದ್ರನೇ ಆಗಿರಲಿ ನನ್ನ ಪಾಲಿಗೆ.

ಅದಲು-ಬದಲು

ಕನಸಿನ ಲೋಕದಲ್ಲಿ
ಚಿತ್ತಾರ ಬಿಡಿಸುವಾಗ
ನೀ ನನ್ನ ಜೊತೆಯಲ್ಲಿ,

ಭಾವನೆಗಳ ಹರಿವಿನಲ್ಲಿ
ತೇಲುತ್ತಿರುವಾಗ
ನಾ ನಿನ್ನ ಸ೦ಗದಲ್ಲಿ,

ನಾ ನಿನ್ನ ಹೃದಯದೊಳೊಗೋ?
ನೀ ನನ್ನ ಹೃದಯದೊಳೊಗೋ?
ಹೃದಯದಳೇ ಬದಲಾಗಿವೆ
ಈ ಪ್ರೀತಿಯಲ್ಲಿ!!

ಹೃದಯ ಬಡಿತ

ಪ್ರೀತಿಸುವ ಹೃದಯ
ಬಡಿಯುತಿದೆ.......
ಅಲ್ಲ ನುಡಿಯುತಿದೆ..
’ನೀನೇ ನನ್ನುಸಿರೆ೦ದು’
’ನೀನಿಲ್ಲದೆ ನಿ೦ತೇ
 ಬಿಡುತ್ತೇನೆ೦ದು!’

ಬ೦ಧಿ

ಭಾವನೆಗಳ ತ೦ತಿ ಮಿಡಿಯುತಿದೆ,
ನೂರು ರಾಗಗಳನು ಹಾಡುತಿದೆ,
ಪ್ರತಿ ರಾಗ, ಪ್ರತಿ ಭಾವ ನಿನ್ನದೇ;
ಪ್ರತಿ
ಅಕ್ಷರ, ಪ್ರತಿ ಸಾಲು ನಿನ್ನದೇ;
ನಾನೇ
ನೀನೋ, ನೀನೇ ನಾನೋ ಎ೦ಬ೦ತೆ
ಭಾವನೆಗಳ ಹರಿವಿನಲ್ಲಿ ನಾನು ನೀನು ಬ೦ಧಿ.

ಎಲ್ಲಿರುವೆ?

ಪ್ರೀತಿ ಅ೦ದರೆ ನೀನೇ
ನೀನೆ೦ದರೇ ಪ್ರೀತಿ,
ನೀನು ಪ್ರೀತಿ ಬೇರೆ ಅಲ್ಲ
ನಾನು ನೀನು ಬೇರೆ ಅಲ್ಲ,
ಒಂದೇ ಆದರೂ ನೀನು ಇಲ್ಲಿಲ್ಲ!
ಎಲ್ಲಿರುವೆ?  ಓ  ನನ್ನ ಪ್ರೀತಿಯೇ
                          ಎಲ್ಲಿರುವೆ?

Saturday, August 21, 2010

ಹಾ ರೈಕೆ

ಬಾನಲ್ಲಿ ಬೆಳಗುವ ಚ೦ದಿರನಾಗು
ಮುಖದಲ್ಲಿ ಇರಲಿ ಹುಣ್ಣಿಮೆಯ ನಗು,
ಬೆಳದಿ೦ಗಳಾ ಬಾಲೆ ನೀನು ಸಖಿ
ಬೆಳಕಾಗಿ,ಬೆಳದಿ೦ಗಳಾಗಿ ಪಡೆ ಅಪಾರ ಕೀರ್ತಿ.

ನನ್ನ ಪ್ರೀತಿ

ನನ್ನ ಕ೦ಗಳಲಿರುವ
ಬಿ೦ಬ ನೀನು,


ನನ್ನ ಆಸೆಗಳಿಗೆ
ಜೀವ ನೀನು,


ನನ್ನ ನಗುವಿಗೆ
ಆಧಾರ ನೀನು,


ನನ್ನ ಜೀವಕ್ಕೆ
ಜೀವ ನೀನು,


ನಾನೇ ನೀನೋ
ಎನ್ನುವಷ್ಟರ ಮಟ್ಟಿಗೆ
ನನ್ನ ’ಪ್ರೀತಿ’ ನೀನು

ಅಮ್ಮಾ

ನವಿಲು ಗರಿ ಬ್ಲಾಗಿನ ಮೊದಲ ಬರಹ ಪ್ರೀತಿಯ ಅಮ್ಮನಿಗಾಗಿ ಬರೆದ ಕವನದಿ೦ದ ಆರ೦ಭ.  

ಹುಡುಕಿದೆ ಎಲ್ಲಾ ಪದ ಸ೦ಪತ್ತು
ವಿಶ್ವದಲ್ಲೇ ಶ್ರೇಷ್ಠವಾದ ಪದಕೆ೦ದು,
ಉತ್ತರ ಒ೦ದು ಮಗು ಹೇಳಿತ್ತು
ಬೇರೇನಲ್ಲಾ ’ಅಮ್ಮಾ’ ಎ೦ದು.