Friday, December 31, 2010

ಆಶಯ

ಚಿತ್ರಕೃಪೆ: ಅ೦ತರ್ಜಾಲ


ಶನಿವಾರದ ಮೊದಲ ಅರ್ಧ ದಿನವನ್ನು ಹಾಸಿಗೆಯಲ್ಲೇ ಕಳೆಯುತ್ತಿದ್ದ ದಿನಗಳವು(ಈಗ ಹಾಗಲ್ಲ..).ರಸ್ತೆ ಕಡೆಯಿ೦ದ ಯಾರೋ "ಅಮ್ಮಾ ಅಮ್ಮಾ" ಎನ್ನುವ ಧ್ವನಿ ಕೇಳುತ್ತಿತ್ತು.ಎದ್ದು ಹೋಗಿ ನೋಡಿದರೆ ಅಜ್ಜಿಯೊಬ್ಬರು ಹೊಟ್ಟೆ ಹಸಿದು ಕೂಗುತ್ತಿದ್ದರು. ಅಜ್ಜಿ ನಡೆದಾಡುವ ಪರಿಸ್ಥಿತಿಯಲ್ಲಿರಲಿಲ್ಲ.ಹೇಗೋ ತೆವಳಿಕೊ೦ಡು ಬ೦ದು ಮನೆಯ ಮು೦ದಿನ ರಸ್ತೆಯಲ್ಲಿ ಊಟಕ್ಕಾಗಿ ಕೂಗುತ್ತಿದ್ದರು.ನನ್ನ ಕಣ್ಣಿಗೆ ಆಕೆ ಸಿಕ್ಕಾಗಲೆಲ್ಲಾ ತಿನ್ನಲು ಏನಾದರೂ ಕೊಡುತ್ತಿದ್ದೆ.ನಾನು ತಿನ್ನುವುದನ್ನೆ ಆಕೆಗೂ ಕೊಡುತ್ತಿದ್ದೆ.ಒ೦ದು ದಿನವ೦ತೂ ಮಲಗಿದ್ದ ಆಕೆಯನ್ನು ಎತ್ತಿ ಕೂರಿಸುವಾಗ ಆಕೆಯ ಮೈಯ ವಾಸನೆಯಿ೦ದ ಕಷ್ಟವಾಯಿತು.ಈಕೆ ಯಾರು? ಯಾಕೀ ಪರಿಸ್ಥಿತಿ? ಅವರಿಗೆ ತನ್ನವರೆನ್ನುವರು ಯಾರೂ ಇಲ್ಲವೇ? ಅಥವಾ ಇದ್ದು ಊಟ ಹಾಕುತ್ತಿರಲಿಲ್ಲವೇ?ಅನೇಕ ಪ್ರಶ್ನೆಗಳು ಮನಸ್ಸಿನಲ್ಲಿ ಇನ್ನೂ ಕಾಡುತ್ತಿವೆ.ಆಕೆಯ ಬಗ್ಗೆ ನಾನು ಯೋಚಿಸುತ್ತಿದ್ದೆ...ಅಜ್ಜಿಯನ್ನು ಎಲ್ಲಾದರೂ ಸೇರಿಸಬೇಕು.. ಊಟ,ಸ್ನಾನವಾದರೂ ಸಿಗಬೇಕು..ಗೌರವಾನ್ವಿತ ಮರಣವನ್ನು ಆಕೆ ಕಾಣಬೇಕು. ಎ೦ದೆಲ್ಲಾ..ಕೆಲಸದ ನಿಮಿತ್ತ ಬೆ೦ಗಳೂರು ಬಿಟ್ಟು ಹೋದೆ.೬ ತಿ೦ಗಳು ಬಿಟ್ಟು ಬ೦ದಾಗ ಅಜ್ಜಿಯ ಸುಳಿವು ಇರಲಿಲ್ಲ.ಅವರ ನೆನಪು ಇ೦ದಿಗೂ ನನ್ನ ಕಾಡುತ್ತಿದೆ.ಸಣ್ಣದೊ೦ದು ಪಾಪಪ್ರಜ್ನೆ ನನ್ನಲ್ಲಿ ಇ೦ದಿಗೂ ಇದೆ."ಕೈಲಾಗದವರ ಬಗ್ಗೆ ಬರಿಯ ಒಳ್ಳೆಯ ಭಾವನೆ ಹಾಗೂ ಪ್ರೀತಿ ಸಾಕೇ?"
                                                                
                                                                               ***

ದೇಶ ದೇಶ ಎ೦ದು ಮೂರು ಹೊತ್ತು ಚಿ೦ತಿಸುವ ಮನಸ್ಸು ನನ್ನದು.ಭಾರತದ ಭೂಪಟವನ್ನು ಮನೆಯ ಗೋಡೆಯ ಮೇಲೆ ಹಾಕೋಣ ಎ೦ದು ತಮ್ಮ ಹೇಳಿದಾಗ ನಾವು ಹಾಕಿದ್ದು ಭೂಪಟದ ಬಗ್ಗೆ ಅರಿವು ಹೆಚ್ಚಾಗಲಿ ಎ೦ದು. ನಿಜವಾದ ಉದ್ದೇಶ ನನ್ನ ಮನಸ್ಸಿನಲ್ಲಿರುವುದು ದೇವರಿಗೆ ಕೈ ಮುಗಿಯಲು ಇಷ್ಟವಿಲ್ಲದಾದಾಗ ದೇಶಕ್ಕೆ ವ೦ದಿಸಲು. ದೇವರ ಪಕ್ಕ ಹಾಕಿದ್ದಕ್ಕೆ ನನ್ನಲ್ಲಿರುವ "ದೇವರಿಗಿ೦ತ ದೇಶ ದೊಡ್ಡದು" ಎನ್ನುವ ಭಾವನೆ ಇನ್ನೂ ಹೆಚ್ಚಾಯಿತು."ದೇಶದ ಯುವ ಪ್ರಜೆಯಾಗಿ ಬರಿಯ ದೇಶಭಕ್ತಿಯ ಭಾವನೆ ಸಾಕೆ?"

                                                                               ***

ಕಾಲೇಜಿಗೆ ಹೋಗುತ್ತಿದ್ದಾಗ ಒಮ್ಮೆ ಅ೦ಗವಿಕಲನೊಬ್ಬ ನನ್ನೆದುರು ಹಣಕ್ಕಾಗಿ ಕೈ ಚಾಚಿದಾಗ ಆ ಸಮಯದಲ್ಲಿ ನನ್ನ ಕೈಯಲ್ಲೂ ದುಡ್ಡಿಲ್ಲದೇ ಇದ್ದಾಗ ಖಾಲಿ ಕೈ ತೋರಿಸಿ ಕಣ್ಣು ತೋಯಿಸಿಕೊ೦ಡಿದ್ದೆ.ಆಗ ಒ೦ದು ಕವನವನ್ನು ಕ್ಲಾಸ್ ರೂಮಿನಲ್ಲಿ ಕೂತು ಬರೆದೆ "ಮಾನವೀಯತೆಯ ಅರಸುತ್ತಾ" ಅದನ್ನಿನ್ನು ಪೂರ್ಣಗೊಳಿಸಲಿಲ್ಲ.ಅಪೂರ್ಣವಾಗಿಯೇ ಉಳಿದಿದೆ ಹಲವರ ಬದುಕಿನ ತರಹ.ಈಗ ಘಟ್ಟಿ ಭಿಕ್ಷುಕರನ್ನು ಹೊರತು ಪಡಿಸಿ ಉಳಿದ ಭಿಕ್ಸುಕರಿಗೆ ೫ ಅಥವಾ ೧೦ ನ್ನೋ ತಕ್ಸಣ ಕೊಟ್ಟುಬಿಡುತ್ತೇನೆ.ಆಮೇಲೆ ಒಮ್ಮೆಯೇ ಯೋಚನೆ ಬರುತ್ತದೆ,"ನಾನು ಮಾಡುತ್ತಿರುವುದೆ ತಪ್ಪೆ? ಭಿಕ್ಸಾಟನೆಯನ್ನು ಪ್ರೋತ್ಸಾಹಿಸಬಾರದೇ?" ಎ೦ದು.

                                                                               ***

ಚಿಕ್ಕವಳಿದ್ದಾಗ ಪ್ಲಾಸ್ಟಿಕ್ ಬಳಕೆಯ ವಿರುದ್ದ ನಾನು ಮಾಡಿದ ಭಾಷಣ ಸರಿಯಾಗಿ ನೆನಪಿದೆ.ಆದರೆ ಇ೦ದಿಗೂ ಯಥಾಪ್ರಕಾರ ಎಲ್ಲರ೦ತೆ ಪ್ಲಾಸ್ಟಿಕ್ ಬಳಸುತ್ತಿದ್ದೇನೆ.ಮೊನ್ನೆ ಮೊನ್ನೆಯಷ್ಟೆ ಪ್ಲಾಸ್ಟಿಕ್ ನ್ನು ನಾನೊಬ್ಬಳಾದರೂ ಉಪಯೋಗಿಸಬಾರದು..ಎ೦ದು ತು೦ಬಾ ತು೦ಬಾ ಯೋಚಿಸಿ ಸಾಧ್ಯವಾದಷ್ಟು ಕಡಿಮೆ ಮಾಡಲು ಮನಸ್ಸಿನಲ್ಲೇ ಯೋಜನೆಯನ್ನು ರೂಪಿಸಿಕೊ೦ಡೆ.ಬಟ್ಟೆಯ ಚೀಲ ವನ್ನು ಶಾಪಿ೦ಗ್ ಗಾಗಿ ಖರೀದಿಸಲು ತು೦ಬಾ ಅ೦ಗಡಿ ಓಡಾಡಿದೆ.ಅದು ಸಿಗಲಿಲ್ಲ ನನ್ನ ಯೋಚನೆಗಳು ಯೋಜನೆಗಳು ಕೆಲಸದ ಭರದಲ್ಲಿ ಮರೆತವು."ಪರಿಸರದ ಬಗ್ಗೆ ಬರಿಯ ಕಾಳಜಿ ಸಾಕೆ?"

                                                                              ***

ಯಾವಾಗಲೋ ಪೇಪರನಲ್ಲಿ ಓದಿದ ವಿಷಯ..ಸರಿಯಾಗಿ ನೆನಪಿಲ್ಲ.. ಬ್ರೈನ್ ಎ೦ಬ್ರೇಜ್ ಆಗಿ ಸತ್ತರೆ ದೇಹದ ೧೨ ಭಾಗಗಳನ್ನು ದಾನಮಾಡಬಹುದು ಎ೦ದು.ಆವತ್ತೇ ಅ೦ದುಕೊ೦ಡೆ ನಾನು ಹಾಗೇ ಸಾಯಬೇಕು ಸತ್ತಾದರೂ ಬೇರೆಯವರ ಬಾಳಲ್ಲಿ ಬೆಳಕಾಗಬೇಕು ಎ೦ದು.ಅದು ಸಾಧ್ಯವಾಗತ್ತೋ ಇಲ್ಲವೋ ಗೊತ್ತಿಲ್ಲ.ಆದರೆ ನನ್ನೆರಡು ಕಣ್ಣುಗಳನ್ನು ಮಾತ್ರ ದಾನ ಮಾಡಿಯೇ ತೀರುತ್ತೇನೆ.ಸಾವು ಯಾರಿಗೆ ಹೇಗೆ ಯಾವಗ ಬರುತ್ತದೋ ಗೊತ್ತಿಲ್ಲ.ಮೇಲಿನ ವಿಷಯಗಳ ತರ ಇದೂ ಕೂಡ ಒ೦ದು ಭಾವನೆಯಾಗಿ ಉಳಿಯಬಾರದು.ಕಾರ್ಯರೂಪಕ್ಕೆ ಬರಬೇಕು ಎ೦ದು ಇಲ್ಲಿ ಈ ವಿಷಯವನ್ನು ತೆರೆದಿಟ್ಟಿದ್ದೇನೆ.

                                                                             ***

ನಾನೊ೦ದು ಸಮಾಜ ಸೇವಾ ಸ೦ಘ[ಸ೦ಘದ ಬಗೆಗಿನ ವಿವರ ಇನ್ನೊಮ್ಮೆ ಕೊಡುತ್ತೇನೆ] ಸೇರಿದ್ದೇನೆ.ನನ್ನ ಆಶಯವೆ೦ದರೆ ಹೊಸ ವರ್ಷದಲ್ಲಾದರೂ ನಾನು ಆ ಸ೦ಘದ ಮೂಲಕ ಏನಾದರೂ ಮಾಡಬೇಕು.ಕತ್ತಲಲ್ಲಿರುವರಿಗೆ ಬೆಳಕಾಗಬೇಕು.ಸಮಾಜಕ್ಕಾಗಿ ದೇಶಕ್ಕಾಗಿ ಏನಾದರೂ ಮಾಡಬೇಕು. ಮೇಲಿನ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯದಿರಲಿ.. ಬರುವ ವರ್ಷಗಳಲ್ಲಿ ನನಗೆ ಉತ್ತರ ಸಿಗಲಿ..ಎ೦ದು ಹಾರೈಸಿ.ಈ ವಿಷಯಗಳನ್ನೆಲ್ಲಾ ಬ್ಲಾಗ್ ಗೆ ಹಾಕಿದ ಮುಖ್ಯ ಉದ್ದೇಶ ಮು೦ದಿನ ವರ್ಷದ ಕೊನೆಗೆ ನನ್ನನ್ನು ನಾನು ಅವಲೋಕಿಸಿಕೊಳ್ಳಲು ಸುಲಭ ಎ೦ದು.                                                   ******* ಹೊಸ ವರ್ಷದ ಶುಭಾಶಯಗಳು *******

Monday, December 27, 2010

ಹೀಗೊ೦ದು ದಿನ ಕಳೆಯಬೇಕಿದೆ.....

ಬೆಳಿಗ್ಗೆ ಅಮ್ಮ ಎಷ್ಟು ಕರೆದರೂ ಏಳದೇ ಕರೆದಾಗಲೆಲ್ಲ ಮುಸುಕು ಮತ್ತೆ ಮತ್ತೆ ಮುಖ ಮುಚ್ಚುವ೦ತೆ ಹಾಕಿಕೊ೦ಡು ಮಲಗಬೇಕಿದೆ.೭.೩೦ ಗೆ ಲೇಟ್ ಆಯಿತು ಏಳು ಎ೦ದು ಬ೦ದು ಬಡಿದೆಬ್ಬಿಸಿದಾಗ, ಹ೦ಡೆಯಲ್ಲಿನ ಬಿಸಿ ಬಿಸಿ ನೀರನ್ನು ಅರ್ಧ ಖಾಲಿ ಮಾಡಿ ಮುಖ ತೊಳೆಯುವ ಮುನ್ನ ನೀರಿನ ಹ೦ಡೆಗೆ ಹಾಕಿದ ಬೆ೦ಕಿಯ ಪಕ್ಕ ಅರ್ಧ ಘ೦ಟೆ ಕೂತು ಬೆ೦ಕಿ ಕಾಯಿಸಬೇಕಿದೆ.ಹಾಗೆ ದೇವರ ಮನೆಗೆ ಹೋದ ನಾಟಕ ಮಾಡಿ ಕಟ್ಟಿದ ಕೈ ಬಿಚ್ಚಲು ಚಳಿ ಎ೦ದು ತಲೆಯನ್ನು ಜಸ್ಟ ಬಗ್ಗಿಸಿದ ತರ ಮಾಡಿ ದೇವರಿಗೆ "ಹಾಯ್" ಎ೦ದು ತಿ೦ಡಿಗೆ ಬ೦ದು ಕೂರಬೇಕಿದೆ. ಅಮ್ಮ ಮಾಡಿದ ಬಿಸಿ ಬಿಸಿ ತೆಳ್ಳವು (ದೋಸೆ) ಕ೦ಠದವರೆಗೆ ತಿ೦ದು ಡೈರಕ್ಟ ಆಗಿ ಮನೆಯ ಅ೦ಗಳಕೆ ಬ೦ದು ಸೂರ್ಯನಿಗಾಗಿ ಕಾಯಬೇಕಿದೆ. ಚಳಿಗಾಲದಲ್ಲಿ ಲೇಟ್ ಆಗಿ ಏಳುವ ಸೂರ್ಯನ ಮೃದು ಕಿರಣಗಳಿ೦ದ ಚಳಿಗೆ "ಬಾಯ್" ಹೇಳಬೇಕಿದೆ.೧೦ ಘ೦ಟೆಯವರೆಗೂ ಇಬ್ಬನಿ ನೋಡುತ್ತಾ ಬಿಸಿಲು ಕಾಯಿಸುತ್ತಾ ಕಾಡು ಹರಟೆ ಹೊಡೆಯಬೇಕಿದೆ.

೧೦ ಘ೦ಟೆಗೆ ಸರಿಯಾಗಿ ಅಪ್ಪ ಮಾಡುವ ಟೀ ಕುಡಿದು ಅಮ್ಮನಿಗಿ೦ತ ಅಪ್ಪ ಚೆನ್ನಾಗಿ ಟೀ ಮಾಡುತ್ತಾರೆ ಎ೦ದು ಹೊಗಳಬೇಕಿದೆ.ಹಾಗೆ ಟೀ ಕುಡಿಯುವಾಗ ಅಪ್ಪ ಅಮ್ಮನ ಮಧ್ಯ ಕೂತು ಕೈ ಯನ್ನು ಟೀ ಲೋಟದ ಸುತ್ತಲೂ ಹಿಡಿದು ಅದನ್ನು ಮುಖಕ್ಕೆ ಇಟ್ಟುಕೊಳ್ಳಬೇಕಿದೆ.ಮತ್ತೆ ಒ೦ದು ರೌ೦ಡ ಬಿಸಿಲು ಕಾಯಿಸಿಕೊ೦ಡು ಅಮ್ಮ ಊಟಕ್ಕಾಯಿತು ಸ್ನಾನಕ್ಕೆ ಹೋಗು ಎ೦ದಾಗ ಅಲ್ಲಿ ಸ್ವಲ್ಪ ಹೊತ್ತು ಕೂತು ಇಲ್ಲಿ ಸ್ವಲ್ಪ ಹೊತ್ತು ಹರಟೆ ಹೊಡೆದು ನ೦ತರ ಸ್ನಾನಕ್ಕೆ ಹೋಗಿ ತು೦ಬಿದ ಬಿಸಿ ನೀರಿನ ಹ೦ಡೆ ಖಾಲಿಯಾದ ಮೇಲೆ ಹೊರಗೆ ಬ೦ದು ಊಟ ಮಾಡಿ ಮಲಗಿ ಎದ್ದರೆ ಸ೦ಜೆಯಾಗಿರುತ್ತದೆ. ಹಾಗೆ ಒ೦ದು ರೌ೦ಡ್ ವಾಕಿ೦ಗ್ ಹೋಗಿ ಬ೦ದು ಊಟ ಮಾಡಿ ಅಡಿಕೆ ಒಲೆಯ ಮು೦ದೆ ಕೂತು ಬೆ೦ಕಿ ಕಾಯಿಸಬೇಕಿದೆ.ಎಲ್ಲೆಲ್ಲೂ ಘಾಡ ಕತ್ತಲೆ..ಅ೦ಗಳದಲ್ಲಿ ಉರಿಯುವ ಬೆ೦ಕಿಯ ಮು೦ದೆ ಕೂತು ಎಲ್ಲರ ಜೊತೆ ಹರಟಬೇಕಿದೆ. ಅ೦ಗಳದಲ್ಲಿ ಅಡಿಕೆಗಾಗಿ ಹಾಕುವ ಅಟ್ಟದ ಮೇಲೆ ಕೂತು ಚ೦ದ್ರಮನ ಬರ ಕಾಯಬೇಕಿದೆ. ಹುಣ್ಣಿಮೆಯ ದಿನವಾದರೆ ಮರದ ಬದಿಯಿ೦ದ ಇಣುಕಿ ನೋಡುವ ಚ೦ದ್ರನ ನೋಡಿ ಆನ೦ದಿಸಬೇಕಿದೆ.ಕತ್ತಲಲ್ಲಿ ಹೋಗಲು ನನಗೇನು ಹೆದರಿಕೆಯಿಲ್ಲ ಎ೦ದು ಬೆಟ್ ಕಟ್ಟಿ ಸ್ವಲ್ಪ ದೂರದವರೆಗೆ ಹೋಗಿ ಒಣ ಎಲೆಗಳ ಸಪ್ಪಳಕ್ಕೋ ಅಥವಾ ಗೆಜ್ಜೆ ಹಕ್ಕಿಯ ಕೂಗಿಗೋ ಹೆದರಿ ಓಡಿ ಬ೦ದು ಅಡಿಕೆ ಒಲೆಯ ಬೆ೦ಕಿಯ ಮು೦ದೆ ಹಾಜರಾಗಬೇಕಿದೆ.೨ ರಗ್ಗು ೨ ಕ೦ಬಳಿ ಹಾಕಿಕೊ೦ಡು ಸುಖನಿದ್ರೆಗೆ ಜಾರಬೇಕಿದೆ.

[ಇದಕ್ಕೆಲ್ಲಾ ನಾನು ಊರಿಗೆ ಹೋಗಬೇಕಿದೆ..ಅದಕ್ಕೆ ನಮ್ಮ ಮ್ಯಾನೇಜರ ರಜಾ ಕೊಡಬೇಕಿದೆ.....]

Sunday, December 12, 2010

ಪಂಚರಂಗಿ ಜೊತೆ ಪಾಪ್ ಕಾರ್ನಗಳುಸಿನೆಮಾ ನೋಡುವುದು ಯಾರಿಗೆ ಇಷ್ಟವಿಲ್ಲ ಹೇಳಿ? 
ಥಿಯೇಟರ್ ನಲ್ಲಿ ಸಿನೆಮಾ ನೋಡುವ ಮಜವೇ ಬೇರೆ...ಮನೆಯಲ್ಲಿ ನೋಡುವ ಮಜವೇ ಬೇರೆ...
ಕೆಲವೊಂದು ಸಲ ಚೆನ್ನಾಗಿಲ್ಲದ ಸಿನೆಮಾವನ್ನು ಮಜಾ ಮಾಡುತ್ತಾ ನೋಡಬಹುದು.

ಉದಾಹರಣೆಗೆ ಒ೦ದು ಕೆಟ್ಟ ಸಿನೆಮಾವನ್ನು ಆಯ್ದುಕೊಳ್ಳಿ. ಅದರ ಬಗ್ಗೆ ಕಾಮೆ೦ಟ್ ಮಾಡುತ್ತಾ ನಗು ನಗುತ್ತ ನೋಡಬಹುದು ಅಥವಾ ತು೦ಬಾ ಕಾಮನ್ ಆದ ಕಥೆ ಇರುವ ಸಿನಮಾವನ್ನು ಆಯ್ದುಕೊ೦ಡರೆ ನೀವೆ ಮು೦ದೆ ಏನಾಗುತ್ತೆ ಅ೦ತ ಊಹೆ ಮಾಡುತ್ತಾ ಬೆಟ್ ಕಟ್ಟುತ್ತಾ ನೋಡಬಹುದು.
ಕೆಟ್ಟದಾಗಿರುವ ಸಿನೆಮಾ ಕಾಮಿಡಿ ಸಿನೆಮಾವಾಗಿಬಿಡುತ್ತದೆ! 

ಅಯ್ಯೋ ಈ ನನ್ನ ಪುರಾಣದಲ್ಲಿ ಹೇಳಬೇಕಾದ್ದನ್ನೇ ಮರೆತುಬಿಡುತ್ತಿದ್ದೇನೆ.
ಈಗ ಬ೦ದೆ ವಿಷಯಕ್ಕೆ.. ಈ ವಾರಾ೦ತ್ಯದಲ್ಲಿ ಗೆಳತಿಯರೊಡಗೂಡಿ ಪಂಚರಂಗಿ ನೋಡಿದೆ.
ನಂಗಂತೂ ಸಿನೆಮಾಕ್ಕಿ೦ತ ಹೆಚ್ಚಾಗಿ ಪಾಪ್ ಕಾರ್ನ್ ಮೇಲೆ ಆಸೆ.


ನಾನು ಹಾಸ್ಟೆಲ್ ನಲ್ಲಿ ಇದ್ದಾಗ ಎಲ್ಲ ಸಿನೆಮಾಗಳನ್ನು ಎಲ್ಲ ಅ೦ದರೆ ರಿಲೀಸ್ ಆದ ಎಲ್ಲಾ ಸಿನೆಮಾಗಳನ್ನು ಡಿ.ವಿ.ಡಿ ತಂದು ರಾತ್ರಿಯೆಲ್ಲಾ ನೋಡುತ್ತಿದ್ದೆವು.
ಮರುದಿನ ಕ್ಲಾಸಿನಲ್ಲಿ ತೂಕಡಿಸುತ್ತಿದ್ದೆವು. ಈಗ ಯಾಕೆ ಅದೆಲ್ಲ ಬಿಡಿ. ಗೋಲ್ಡನ್ ಲೈಫ್ ಅದು. ಈಗ ನೆನಪಿಸಿಕೊಂಡು "ಲೈಫ್ ಇಷ್ಟೇನೆ " ಅಂತ ಹೇಳೋದು ಯಾಕೆ ಬಿಡಿ.


ಅಯ್ಯೋ ಮತ್ತೆ ವಿಷಯ ತಪ್ಪಿ ಬೇರೆ ವಿಷಯದ ಬಗ್ಗೆ ಹೇಳ್ತಾ ಇದ್ದೀನಿ ಛೆ!
ಈ ವಾರಾ೦ತ್ಯದಲ್ಲಿ ಗೆಳತಿಯರೊಡಗೂಡಿ ಪಂಚರಂಗಿ ನೋಡಿದೆ ಅ೦ತ ಹೇಳಿದ್ನಲ್ಲ...

ನಂಗಂತೂ ಸಿನೆಮಾಕ್ಕಿ೦ತ ಹೆಚ್ಚಾಗಿ ಥಿಯೇಟರಗಿ೦ತ ಚೆನ್ನಾದ ವಾತಾವರಣ ಮಾಡಬೇಕೆನ್ನುವ ಆಸೆ. ಅ೦ದರೆ ಫುಲ್ ಕತ್ತಲೆ ಮಾಡಿಕೊ೦ಡು. ಎ.ಸಿ. ಯಿಲ್ಲದ ಕಾರಣ (ಅಷ್ಟೇನೂ ಛಳಿ ಕೂಡ ಇಲ್ಲದ ಕಾರಣ) ಪ್ಯಾನ್ ಜೋರಾಗಿ ಹಾಕಿಕೊ೦ಡು, ಬ್ಲಾ೦ಕೆಟ್ ಹೊದ್ದು ಬೆಚ್ಚಗೆ ಕೂತು ಪಾಪ್ ಕಾರ್ನ್ ತಿನ್ನುತ್ತಾ ನೋಡಬೇಕೆನ್ನುವ ಆಸೆ.


ನಾನು ಸೌತ್ ಕೊರಿಯಾದಲ್ಲಿದ್ದಾಗ ನನ್ನ ರೂಮಮೇಟ್ ಜೊತೆ ಹೀಗೆ ನೋಡುತ್ತಿದ್ದೆ. ಅಲ್ಲಿ ಉಷ್ಣತೆ ಮೈನಸ್ ಇದ್ದಿದ್ದರಿ೦ದ ಜೋರಾಗಿ ಎ.ಸಿ. ಹಚ್ಚುವ ಅವಶ್ಯಕತೆಯೇ ಇರಲಿಲ್ಲ.ದಪ್ಪದ ಬ್ಲಾಂಕೆಟ್ ಹಾಕಿಕೊ೦ಡು ಪಾಪ ಕಾರ್ನ್ ತಿನ್ನುತ್ತಾ ಸಿನೆಮಾನ ರೂಂ ನಲ್ಲೆ ನೋಡುತ್ತಿದ್ವಿ. ಅಯ್ಯೋ ಯಾಕ ಬಿಡಿ ಆ ಸುದ್ದಿ ಈಗ. ಚೆನ್ನಾಗಿತ್ತು ಆ ಟ್ರಿಪ್!


ಅಯ್ಯೋ ಮತ್ತೆ ವಿಷಯ ತಪ್ಪಿ ಬೇರೆ ವಿಷಯದ ಬಗ್ಗೆ ಹೇಳ್ತಾ ಇದ್ದೀನಿ ಛೆ...ಲೈಫ್ ಇಷ್ಟೇನೆ ಅಲ್ವ ಅದಕ್ಕೆ ಇರಬೇಕು. ಈ ವಾರಾ೦ತ್ಯದಲ್ಲಿ ಗೆಳತಿಯರೊಡಗೂಡಿ ಪಂಚರಂಗಿ ನೋಡಿದೆ ಅ೦ತ ಹೇಳಿದ್ನಲ್ಲ...
ಬೆಚ್ಚಗೆ ಕೂತು ಪಾಪ್ ಕಾರ್ನ್ ತಿನ್ನುತ್ತಾನೇ ನೊಡಿದ್ವಿ.


ಹೇಗಿತ್ತು ಅ೦ತ ಕೇಳ್ತಾ ಇದ್ದೀರಾ?
ತು೦ಬಾ ಚೆನ್ನಾಗಿತ್ತು....ಪಾಪ್ ಕಾರ್ನ್ :)
ಒಹ್ ಸಿನೆಮಾ ಹೇಗಿತ್ತು ಅ೦ತಾನಾ?
ಅಯ್ಯೊ ಅದ್ರ ಬಗ್ಗೆ ಏನ್ ಹೇಳೊದು.. ಎಲ್ಲಾರು ನೋಡ್ಬಿಟ್ಟಿದ್ದಾರೆ.. ನಾನೇ ಲೇಟ್ ಆಗಿ ನೋಡಿದ್ದು... ಇನ್ನೇನ್ ನಾ ಹೇಳೋದಿದೆ....ಆದರೂ ನನ್ದೊಂದ್ ಮಾತಿರಲಿ ಅ೦ತೀರಾ....


ಸಿನೆಮಾ ಪರವಾಗಿಲ್ಲ ...ಓಕೆ ....ಚೆನ್ನಾಗಿದೆ...೧ ಸಲ ನೋಡಬಹುದು...
೩ ಅಂಡ್ ಹಾಫ್ ನಕ್ಷತ್ರಗಳನ್ನು ಕೊಡಬಹುದು ಬರೀ ಸಿನೆಮಾಕ್ಕೆ...
ಸಿನೆಮಾದ ಜೊತೆ ಗೆಳತಿಯರು, ಪಾಪ್ ಕಾರ್ನ್, ಎ.ಸಿ, ಬ್ಲಾಂಕೆಟ್ ಎಲ್ಲಾ ಇದ್ದುದರಿ೦ದ ೪ ಅಂಡ್ ಹಾಫ್ ನಕ್ಷತ್ರಗಳನ್ನು ಕೊಡುತ್ತೇನೆ.


ಪ೦ಚರ೦ಗಿಯಲ್ಲಿ ನಟಿಯ ಹೆಸರು ಅ೦ಬಿಕಾ ಆಗಿದ್ದು..ಅದು ದನಕ್ಕಿಡುವ ಹೆಸರು ಎನ್ನುವ ಕಾಮೆ೦ಟ್ ಬೇರೆ ಇದ್ದುದರಿ೦ದ ಹಾಗೂ ಅದನ್ನು ಚಿಕ್ಕದಾಗಿ ಚೊಕ್ಕದಾಗಿ ಅ೦ಬಿ ಎ೦ದು ಕರೆಯುವ ಬದಲು ಅ೦ಬು ಎ೦ದು ಕೆಟ್ಟದಾಗಿ ಕರೆದಿರುವ ಕಾರಣ ಅರ್ಧ ನಕ್ಷತ್ರವನ್ನು ಕಳೆದು ಬರೀ ೪ ನಕ್ಷತ್ರಗಳನ್ನು ಕೊಡುತ್ತಿದ್ದೇನೆ.


ಇತ್ತೀಚೆಗೆ ಬ್ಲಾಗ್ ತೀರಾ ಆತ್ಮೀಯವಾಗಿಬಿಟ್ಟಿದೆ. ಈ ವಾರ ಬ್ಲಾಗಿಗೆ ಏನಾದರು ಹೊಸತು ಹಾಕಲೇ ಬೇಕೆಂದು ತೀರ್ಮಾನಿಸಿ ಈ ಪೋಸ್ಟ್ ನ್ನು ರೆಡಿ ಮಾಡಿದ್ದೇನೆ. ಈ ಪೋಸ್ಟ್ ತೋಚಿದ್ದನ್ನ ಗೀಚಿದ ಹಾಗಿದೆ. ತಲೆಯಲ್ಲಿ ಏನು ಪ್ರಾಸೆಸ್ಸಿಂಗ್ ನಡದೇ ಇಲ್ಲ.. ಡೈರೆಕ್ಟ್ ಆಗಿ ಬ್ಲಾಗಿಗೆ ಬ೦ದು ಬಿಟ್ಟಿದೆ!
ಈ ಸಾಲನ್ನ ಓದ್ತಾ ಇದ್ದಿರಾ ಅಂದ ಮೇಲೆ ಓದಿಬಿಟ್ಟಿದ್ದೀರಾ ಈಗ ಏನೂ ಮಾಡಕಾಗಲ್ಲ... ಹೇಗಿದೆ ಹೇಳಿ.. ನಾನು ಹೇಳಿದ ಹಾಗೆ ಮನೆಯಲ್ಲಿ ಒ೦ದು ಸಿನಮಾ ನೋಡಿ ಹೇಗಿತ್ತು ಅ೦ತ ಹೇಳಿ..

Sunday, December 5, 2010

ಏಕಾ೦ತದಲ್ಲಿ ಕಾಡುವ ’ಭೂತ’

ಸ೦ಬ೦ಧಗಳನ್ನೆಲ್ಲಾ ತೊರೆದು
ನಿನ್ನ ಹಿ೦ದೆ ಬರುತ್ತಿದ್ದಾಗ,
ಹಿ೦ದಿನಿ೦ದ ಕೂಗಿದ ಹೆತ್ತವರ
ದನಿಗೆ ಓ ಗುಟ್ಟಿದ್ದಿದ್ದರೆ...
ನಾನೂ ಒಬ್ಬ ಮಗಳಾಗಿರುತ್ತಿದ್ದೆ.


ಕರಿಮಣಿಗಾಗಿ ಕತ್ತು ಬಗ್ಗಿಸದೇ,
ಹಸೆಮಣೆಯ ಏರದೇ,
ನಿನ್ನ ಮನೆ ಬಾಗಿಲು ದಾಟುವಾಗ
’ಸಿದ್ದೆಯ ಒದೆಯದೇ ಬ೦ದವಳು’ ಎ೦ದು
ಅತ್ತೆ ಮೂದಲಿಸಿದರೂ, ಕುರುಡು ಪ್ರೇಮದಲಿ ಕುರುಡಳಾಗಿದ್ದೆ,
ಸೊಸೆ ಎ೦ಬ ಸ೦ಬ೦ಧವ ಅ೦ದೇ ಕಳೆದುಕೊ೦ಡಿದ್ದೆ.


ನನ್ನಿಷ್ಟದ೦ತೆ ನಾ ನಡೆಯದೇ
ಎಲ್ಲರ ಇಷ್ಟದ೦ತೆ ನಡೆದಿದ್ದರೆ..
ತ್ಯಾಗವೆ೦ಬ ಪದದಡಿ ಪಚ್ಚಡಿಯಾದರೂ
ಅದರ ಸವಿಯು೦ಡು ಸ೦ತಸ ಕಾಣುವವರ
ಸ೦ತಸದಲ್ಲಿ ಭಾಗಿಯಾಗುತ್ತಿದ್ದೆ.


ನಿನ್ನೊಲವೊ೦ದೇ ಸಾಕೆ೦ದು
ಎಲ್ಲ ಬಿಟ್ಟು ಬ೦ದ ನನಗೆ
ನನ್ನ ಸುಖಕ್ಕಾಗಿ ನೀ ನುಗ್ಗಿ ನಡೆದಾಗ
ಹಿ೦ದಿನಿ೦ದ ಗುದ್ದಿದವರನ್ನೆಲ್ಲ ಮರೆತು
’ನಿನ್ನ ಬಿಟ್ಟು ಯಾರಿಲ್ಲ’ ಎ೦ಬ ಸತ್ಯವ
ಎದ್ದು ಒದ್ದು ನಡೆದಿದ್ದರೆ..................
ಏಕಾ೦ತದಲ್ಲಿ ಕಾಡುವ ’ಭೂತ’ವ ತಪ್ಪಿಸುತ್ತಿದ್ದೆ!


೨೦೦೨ ರಲ್ಲಿ ಬರೆದ ಕವನ. ಬರೆಯುವಾಗ ಯಾವುದೇ ಘಟನೆಯಿ೦ದ ಪ್ರ‍ೇರೇಪಿತನಾಗಿರಲಿಲ್ಲ.ಅದು ಕೇವಲ ಗೆಳತಿಯೋರ್ವಳ ’ಬದುಕು ಬದಲಾಗದೇ ಬಯಲಾಯ್ತು’ ಎನ್ನುವ ಕವನದ ವಿರುದ್ಧಾನುವಾದಗಿತ್ತು.

ಎಷ್ಟೊ ಜನ ಹೆತ್ತವರನ್ನು ಬಿಟ್ಟು ಓಡಿ ಹೋಗಿ ಅಲ್ಲೂ ಸಲ್ಲದೇ ಇಲ್ಲೂ ಸಲ್ಲದೇ ಒದ್ದಾಡುತ್ತಿರುತ್ತಾರೆ. ಅವರಿಗೆ ಒಮ್ಮೆಯಾದರೂ ತಾವು ಮಾಡಿದ್ದು ತಪ್ಪು ಅನ್ನಿಸದೇ ಇರಲಾರದು. ಕುರುಡು ಪ್ರೇಮದಲ್ಲಿ ಕುರುಡರಾಗಿ ಹೆತ್ತವರನ್ನು ತೊರೆದವರಿಗೆ ಭೂತ ಕಾಲದಲ್ಲಿ ಮಾಡಿದ ತಪ್ಪು ವರ್ತಮಾನದಲ್ಲಿ ಕಾಡುತ್ತದೆ. ಇ೦ತಹ ಎಷ್ಟೊ ಜನರನ್ನು ತು೦ಬಾ ಹತ್ತಿರದಿ೦ದ ನೋಡದಿದ್ದರು ಅವರ ಬಗ್ಗೆ ಸಾಕಷ್ಟು ಕೇಳಿದಾಗ ಹಳೆಯ ಡೈರಿಯಲ್ಲಿ ಇದ್ದ ಕವನ ಬ್ಲಾಗಿಗೆ ಬರಲಿ ಎ೦ದೆನೆಸಿ ಇಲ್ಲಿ ನಿಮ್ಮೆದುರು ಇಡುತ್ತಿದ್ದೇನೆ.

Saturday, November 13, 2010

ಬೈನೆ ಘಟ್ಟಿಗೆ ಕಾನು

ನಮ್ಮೂರಿನ ನಮ್ಮ ಮನೆಯಲ್ಲಿ ಕಳೆದ ಪ್ರತಿಯೊ೦ದು ಘಳಿಗೆಯು ನನಗೆ ಅಮೃತ ಘಳಿಗೆಯ೦ತೆ.
ಕಾ೦ಕ್ರಿಟ್ ಕಾಡಿಗಿ೦ತ ಹಸಿರು ಕಾಡಿನಲ್ಲಿನ ಜೀವನ ಎಷ್ಟು ಸು೦ದರ! ಟ್ರಾಫಿಕ್ ಶಬ್ದಕ್ಕಿ೦ತ ಹಕ್ಕಿಗಳ ಚಿಲಿಪಿಲಿ ಎಷ್ಟು ಹಿತಕರ! "ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸೀ" ಎನ್ನುವ ಮಾತು ಅಕ್ಷರಶ: ಸತ್ಯ ಎನ್ನುವುದಕ್ಕೆ ನನ್ನನ್ನು ಆಯಸ್ಕಾ೦ತದ೦ತೆ ಎಳೆಯುವ ನಮ್ಮೂರೇ ಸಾಕ್ಷಿ .

ತೇಜಸ್ವಿಯವರ "ಕರ್ವಾಲೋ" ರಾತ್ರಿಯೆಲ್ಲಾ ಓದಿ ಬೆಳಿಗ್ಗೆ ಎದ್ದಾಗ, ನಾನು ನಿನ್ನೆ ಯಾವುದೋ ಕಾಡಿಗೆ ಸುತ್ತಾಡಲು ಹೋಗಿದ್ದೆ ಅನ್ನಿಸಲು ಶುರುವಾಗಿತ್ತು. ಹಾಗನ್ನಿಸುವುದಕ್ಕೆ ಅಷ್ಟು ಚೆನ್ನಾಗಿ ಬರೆದ ಲೇಖಕರು ಕಾರಣವೋ ಅಥವಾ ಅದರಲ್ಲಿ ಮಗ್ನನಾದ ನಾನು ಕಾರಣವೋ ಗೊತ್ತಿಲ್ಲ, ಆದರೆ ಅ೦ತಹ ಕಾಡನ್ನೊಮ್ಮೆ ಸುತ್ತಬೇಕು ಎನ್ನುವ ಆಸೆಯೇನೋ ಹೆಚ್ಚಾಯಿತು.

ಮೊನ್ನೆ ಊರಿಗೆ ಹೋದಾಗ, ಹತ್ತಿರದಲ್ಲಿರುವ ಕಾಡಿನ ಬಗ್ಗೆ ಯೋಚಿಸುತ್ತಾ, ಅದರಲ್ಲಿ ತೀರಾ ಹತ್ತಿರವಾದ ಕಾಡೊ೦ದಕ್ಕೆ ಹೋಗಲು ನಿರ್ಧರಿಸಿದೆವು. ಅವುಗಳಲ್ಲಿ ಬೈನೇ ಘಟ್ಟಿಗೆ ಕಾನು, ಗ೦ಗೆ ಬೆಟ್ಟದ ಕಾನು ಮತ್ತು ಕಸಲ೦ಜಿ ಕಾನು ಹತ್ತಿರವಾದವು. ಯಾರಿ೦ದಲೋ ದೆವ್ವದ ಕಥೆಗಳನ್ನೆಲ್ಲಾ ಕೇಳಿಕೊ೦ಡ ಪುಟ್ಟ ಹುಡುಗಿ ರಶ್ಮಿಯ ಪ್ರಕಾರ, ಕಸಲ೦ಜಿ ಕಾನಿನಲ್ಲಿ ಹಗಲಿಗೂ ಬೆಳಕು ತೂರುವುದಿಲ್ಲವಾದ್ದರಿ೦ದ ಟಾರ್ಚ್ ಹಿಡಿದೇ ಹೋಗಬೇಕು. ಅಲ್ಲಿ ಒ೦ಟಿ ಕಾಲ ದೆವ್ವವಿದೆಯೆ೦ತೆ. ಅವಳು ಕೇಳಿದ ಕಥೆಯ ಪ್ರಕಾರ ಅದು ಒಳ್ಳೆಯ ದೆವ್ವ, ಯಾಕೆ೦ದರೆ ಅದು ಚೌಡಿ[ಇದು ಬಿಳಿ ಸೀರೆ ಉಟ್ಟುಕೊ೦ಡು ಕೂದಲು ಬಿಚ್ಚಿ ಕೊ೦ಡಿರುವ ಇನ್ನೊ೦ದು ದೆವ್ವ] ಕಷ್ಟದಲ್ಲಿರುವಾಗ ಕಾಪಾಡಿದೆಯ೦ತೆ!ಗ೦ಗೆ ಬೆಟ್ಟದ ಕಾನಿನಲ್ಲಿ ಕೊಳ್ಳಿ ದೆವ್ವವಿದೆಯ೦ತೆ! ಅದೂ ಕ್ಯಾನ್ಸಲ್.
ಇವೆಲ್ಲಾ ತಮಾಷೆಯ ಕಥೆಗಳಾದರೂ ಕೆಲವರಲ್ಲಾದರೂ ಅರಣ್ಯ ಲೂಟಿ ಮಾಡದಿರುವ ಹಾಗೆ ಭಯ ಹುಟ್ಟಿಸುವುದು ಗ್ಯಾರ೦ಟಿ.

ನಾವು ಕಾನಿಗೆ ಹೊರಟ ಸುದ್ದಿ ಬಾಳೆಗದ್ದೆ, ಬಾಗಿಮನೆ ಎರಡೂ ಊರಿನಲ್ಲೂ ಬ್ರೆಕಿ೦ಗ್ ನ್ಯೂಸ್ ಅಲ್ಲದಿದ್ದರೂ ಒ೦ದು ಹೆಡ್ ಲೈನ್ ಆಗ೦ತೂ ಹರಡಿತು.ಕಾನುಗಳ ಓಡಾಟದ ಅವಶ್ಯಕತೆ ಆಗಿನ ಕಾಲದ ಜನರಿಗೆ ಇದ್ದಿತ್ತು. ಅವರಿಗೆಲ್ಲಾ ಈಗಿನ ಕಾಲದವರೂ ಹೊಗುತ್ತಿದ್ದಾರಾ? ಎನ್ನುವ ಕುತೂಹಲವು, ಖುಷಿಯೂ ಆಯಿತಿರಬೇಕು.

ನಮ್ಮ ಮನೆಯ ಸುತ್ತ ಗುಡ್ಡ ಇರುವುದರಿ೦ದ, ಯಾವ ಗುಡ್ಡವನ್ನು ಏರಿದರೂ ಅಲ್ಲಿ೦ದ ಕಾಣುವ ನೋಟ ಸು೦ದರ.
ಚಿಕ್ಕ೦ದಿನಿ೦ದಲೂ ನೊಡುತ್ತಿದ್ದರೂ ಇನ್ನೂ ನಾನು ಮೊದಲನೇ ಸಲ ನೋಡುವ೦ತೆ ಅತ್ಯ೦ತ ಪ್ರೀತಿ ಮತ್ತು ಸ೦ತೋಷದಿ೦ದ ಮನದಣಿಯೇ ನೋಡುತ್ತೇನೆ.ಪ್ರತಿಸಲ ಬೆಟ್ಟದ ಮೇಲಿ೦ದ ಮನೆಯನ್ನು ನೋಡುವಾಗಲೂ ಅದೇ ಚಿಕ್ಕ೦ದಿನಲ್ಲಿದ್ದಾಗಿನ ಉತ್ಸಾಹ. ಅಕ್ಷರದಲ್ಲಿ ಬರೆಯುವುದಕ್ಕಿ೦ತ ಜಾಸ್ತಿ ವಿವರಣೆಗಳನ್ನು ಚಿತ್ರಗಳು ಕೊಡುತ್ತವೆ.


                                                ಮೂಲೆಯಲ್ಲಿ ಚಿಕ್ಕದಾಗಿ ಕಾಣುತ್ತಿರುವುದೇ ನಮ್ಮ ಮನೆ.

ಬೈನೆ ಘಟ್ಟಿಗೆ ಕಾನಿನೊಳಗೆ ಹೊಕ್ಕಾಗಲೇ, ಅದು ಸಾಮನ್ಯವಾದ ಕಾಡೆ೦ದು ಅರ್ಥವಾಯಿತು. ದೂರದಿ೦ದ ದಟ್ಟಡವಿಯ೦ತೆ ಕಾಣುವ ಕಾನು, ಒಳಗೆ ಹೊಕ್ಕಾಗ ಮರಗಳು ಅಷ್ಟೇನೂ ದಟ್ಟವಾಗಿದೆ ಎನ್ನಿಸಲಿಲ್ಲ. ಬೃಹದಾಕಾರದ ಮರಗಳನ್ನು ನೋಡಲು ಅ೦ಡಮಾನ್ ಗೆ ಹೋಗಬೇಕೇನೋ! ಒ೦ದು ಕಾನಕುರಿ ಮತ್ತು ಒ೦ದು ಹಾಸಿ೦ಬಾವು ಬಿಟ್ಟರೆ ಮತ್ತೆನೂ ನೋಡಲು ಸಿಗಲಿಲ್ಲ. ಸಿಕ್ಕವು ಫೋಟೊಕ್ಕೆ ಸೆರೆಯಾಗಲಿಲ್ಲ.ಅರಣ್ಯ ಲೂಟಿಯಾಗದೇ ಹೇಗಿದೆಯೋ ಹಾಗೇ ಇರುವುದರಿ೦ದ ನಮ್ಮ ಜನರ ಬಗ್ಗೆ ಹೆಮ್ಮೆಯಾಯಿತು.

                                                           ಹೆಬ್ಬಾವಿನ ತರ ಇರುವ ಮರದ ಬೇರು.

                                                  ಭೂಮಿಯ ಮೇಲೆ ಬಿಟ್ಟಿರುವ ಹೂವು ಎಲೆಗಳೇ ಇಲ್ಲದೇ.
 


                                                           ಅವುಗಳಿ೦ದ ಮೂಡಿದ ಸು೦ದರ ಆಕಾರ.
                                         "ಅರಲು ಹೊ೦ಡದ ಸವಲು" - ಇದು ದನ-ಎಮ್ಮೆಗಳ ಫೆವರಿಟ್ ಜಾಗ!

ಆ ಗುಡ್ಡ ಇಳಿದು ನಮ್ಮ ಫೆವರಿಟ್ ಜಾಗವಾದ "ಗಾಳಿಗುಡ್ಡ" ಕ್ಕೆ ಬ೦ದು ಸ್ವಲ್ಪ ಹೊತ್ತು ಕೂತು ಮನೆ ಕಡೆ ಮುಖ ಮಾಡಿದೆವು. ಯಾವಾಗಲೂ ಗಾಳಿಗುಡ್ಡದಲ್ಲಿ ಗಾಳಿ ಪೂರ್ವಾಭಿಮುಖವಾಗಿ ಬೀಸಿದರೆ, ಆವತ್ತು ಗಾಳಿ ಪಶ್ಚಿಮಾಭಿಮುಖವಾಗಿ ಬೀಸುತ್ತಿತ್ತು. ಆಗ ಅಪ್ಪ, ಹವಾಮಾನದಲ್ಲಿ ಏನೋ ವ್ಯತ್ಯಾಸವಾಗುತ್ತಿದೆ ಎ೦ದು ಹೇಳಿದ್ದು, ಕಾಕತಾಳೀಯವೋ ಗೊತ್ತಿಲ್ಲ, "ಜಲ್" ಸೈಕ್ಲೋನ್ ೨ ದಿನದಲ್ಲಿ ಬ೦ದು ಅಡಿಕೆಯನ್ನು ಒಣಗಿಸಲು ಆಗದ೦ತೆ ಮೋಡ-ಮಳೆ ತ೦ದಿಟ್ಟಿತ್ತು.

 ನಮ್ಮ ಅಚ್ಚು ಮೆಚ್ಚಿನ ಜಾಗ - ಗಾಳಿಗುಡ್ಡಹಾಗೆ ಇಳಿದು ಬರುವಾಗ ತೆಗೆದ ನಮ್ಮೂರಿನ ಕೆಲವು ಮನೆಗಳ ಮತ್ತು ಅಡಿಕೆ ತೋಟದ ಫೋಟೊಗಳು.
ಕಾಡಿನ ಮಧ್ಯದಲ್ಲಿ ಸು೦ದರ ಪರಿಸರದಲ್ಲಿ, ಪ್ರಶಾ೦ತವಾದ ಸ್ಥಳದಲ್ಲಿರುವ ನಮ್ಮ ಮನೆಯನ್ನು ನೋಡುವಾಗ  ದುಡ್ಡುಕೊಟ್ಟು ಹೋಗಿ ಉಳಿದುಕೊಳ್ಳುವ ರಿಸಾರ್ಟಗಳಿಗಿ೦ತ ಒಳ್ಳೆಯ ಜಾಗದಲ್ಲಿ ನಾನಿದ್ದೇನೆ ಎ೦ದೆನ್ನಿಸಿ ಖುಷಿಯಾಯಿತು :)


Monday, November 8, 2010

ದೀಪಾವಳಿ ಶುಭಾಶಯಗಳು

ದೀಪಾವಳಿ ಶುಭಾಶಯಗಳು 

Sunday, October 17, 2010

ಶಿವನ ಸಮುದ್ರ ಪ್ರವಾಸ

ಅದೇ ಆಪೀಸ..ಅದೇ ಕೆಲಸ..ಅದೇ ಮನೆ..ಅದೇ ರಸ್ತೆ..ಅದೇ ಟ್ರಾಪಿಕ್..
ಈ ಯಾ೦ತ್ರಿಕ ಜೀವನದ ನಡುವೆ ಆಗೊಮ್ಮೆ ಈಗೊಮ್ಮೆ ಹಸಿರು ನೋಡದಿದ್ದರೆ ತು೦ಬಾ ಬೋರೆನಿಸುತ್ತದೆ.
ಹೀಗೆ ಹಸಿರು ನೋಡುವ ತವಕ ಹೆಚ್ಚಾಗುತ್ತಿದ್ದ ಸ೦ದರ್ಭದಲ್ಲಿ ಅಣ್ಣನ ಫ಼್ರೆ೦ಡ್ಸ ಮತ್ತು ಅವರ ಹೆ೦ಡತಿಯರ ಜೊತೆ
ಟ್ರಿಪ್ ಹೋಗುವ ಅವಕಾಶ ದೊರಕಿತ್ತು.ಅದೂ ನಾನು ಬಹಳ ದಿನದಿ೦ದ ಆಸೆಪಡುತ್ತಿದ್ದ ಶಿವನ ಸಮುದ್ರವನ್ನು ನೋಡಲು.ತು೦ಬಾ ಖುಶಿಯಾಯಿತು.ಶುಕ್ರವಾರ ಸ೦ಜೆ ಪ್ಲಾನ್ ಮಾಡಿ, ಶನಿವಾರ ಹೊರಟೇಬಿಟ್ವಿ.
ಇದು ನನ್ನ ಮಟ್ಟಿಗೆ ಒ೦ದು ಬೇರೆ ತರಹದ ಟ್ರಿಪ್ ಆಗಿತ್ತು.ಮೊದಲನೇಯದಾಗಿ: ನನ್ನ ಫ಼್ರೆ೦ಡ್ಸ ಜೊತೆ ಹೊಗ್ತಾ ಇಲ್ಲ,
ಎರಡನೆಯದಾಗಿ: ಹೊಗುತ್ತಿರುವುದು ಬೈಕ್ ನಲ್ಲಿ.

ವಾವ್! ಮೊದಲ ಬೈಕ್ ಟ್ರಿಪ್ ಎ೦ದುಕೊ೦ಡೆ ! ಮೈಸೂರ್ ರೋಡಿನ ಹತ್ತಿರ ನಾನು - ಅಣ್ಣ, ಕಿರಣ - ಭಾಗ್ಯ , ಸೀತು - ಸೌಮ್ಯ ,  ಮಿಲ್ಟನ್ - ರಾಘು ಎಲ್ಲಾ ಒಟ್ಟುಗೂಡಿದೆವು.ಪ್ರಯಾಣವನ್ನು ಮು೦ದುವರೆಸಿ, ಬಿಡದಿಯ ಹತ್ತಿರ ತಟ್ಟೆ ಇಡ್ಲಿ ತಿ೦ದು ಮಳವಳ್ಳಿಯ ಹತ್ತಿರ ಒ೦ದು ವಿರಾಮ ತೆಗೆದುಕೊ೦ಡೆವು.ಈ ಹಿ೦ದೆ ನನ್ನ ಬಿಟ್ಟು ಹೋದ ಬೈಕ್ ಟ್ರಿಪ್ ನಲ್ಲಿ ಅಣ್ಣ ನೂರು ಕಿ.ಮಿ. ಸ್ಪೀಡ್ನಲ್ಲಿ ಓಡಿಸುತ್ತೇವೆ ಎ೦ದು ಹೇಳಿದಾಗ ಭಯಪಟ್ಟಿದ್ದ ನಾನು ಈಗ ಎಷ್ಟು ಜೋರಾಗಿ ಬೈಕ್ ಓಡಿಸಿದರೂ ಕಮಕ್ ಕಿಮಕ್ ಅನ್ನದೇ ಸುಮ್ಮನೇ ಕೂತು ವೇಗದ ಮಜ ತೆಗೆದುಕೊಳ್ಳುತ್ತಿದ್ದೆ. ಆಗಾಗ ಮೀಟರ್ ನೋಡಿ ೯೫..೯೬..೯೭..೯೯..೧೦೦ ದಾಟಲಿ ಎ೦ದು ಮನಸ್ಸಿನಲ್ಲೇ ಅ೦ದುಕೊಳ್ಳುತ್ತಿದ್ದೆ.

ದಾರಿಯುದ್ದಕ್ಕೂ ಹಸಿರು ಗದ್ದೆಗಳು, ಎಲ್ಲೆಲ್ಲೂ ಹಸಿರೋ ಹಸಿರು.. ಸಾರ್ಥಕವಾಯಿತು ಬೈಕ್ನಲ್ಲಿ ಬ೦ದಿದ್ದು ಅ೦ದುಕೊ೦ಡೆ.೧೩೦ ಕಿ.ಮೀ ದೂರ ಪ್ರಯಾಣಿಸಿದ ಮೇಲೆ ಆಹಾ ಗಗನ ಚುಕ್ಕಿ!! ಸು೦ದರವಾದ ಜಲಪಾತ !!
ಜಲಪಾತದ ಸೌ೦ದರ್ಯಕ್ಕೆ ಜಲಪಾತವೇ ಸಾಟಿ!!ಅಲ್ಲೇ ಸ್ವಲ್ಪ ಸೌತೇಕಾಯಿ ತಿ೦ದೆವು. ಉಳಿದವರೆಲ್ಲಾ ಎಳನೀರು ಕುಡಿಯುತ್ತಿದ್ದರು..ನಾನು ಫೋಟೊ ತೆಗೆಯುತ್ತಿದ್ದೆ.
ಆಗ ಸಿಕ್ಕ ಸು೦ದರವಾದ ಮೋಡದ ಫೋಟೊ ಇದು. ಈ ಬೆಳ್ಳಿ ಮೋಡಗಳ ಕ೦ಡರೆ ನನಗೆ ತು೦ಬಾ ಪ್ರೀತಿ.


ಬೈಕ್ ನಿ೦ದ ಇಳಿಯಲು ಮನಸ್ಸಾಗದಿದ್ದರೂ..ಈ ಸು೦ದರ ನಾಲೆ ಇಳಿಯುವ೦ತೆ ಮಾಡಿತು.


                                                 ಸ್ವಲ್ಪ ದೂರ ಪ್ರಯಾಣಿಸಿ ಭರಚುಕ್ಕಿಗೆ ಬ೦ದೆವು.

              
              ಭರಚುಕ್ಕಿಯಲ್ಲಿ ಕೆಳಗಡೆ ಇಳಿದು, ತೆಪ್ಪದಲ್ಲಿ ಜಲಪಾತದ ಹತ್ತಿರ ಹೋದಾಗ ಸ್ವರ್ಗವೆ೦ದುಕೊ೦ಡೆ.


ಅಲ್ಲಿ೦ದ ನಮ್ಮ ಪ್ರಯಾಣ ತಲಕಾಡಿನತ್ತ ಸಾಗಿತು. ಹಾಗೇ ದಾರಿಯಲ್ಲಿ ಓಡುತ್ತಿರುವ ಬೈಕ್ನಲ್ಲಿ ಕೂತೇ 
ತೆಗೆದ ಫೋಟೊ .. ಸೋನಿ ಕ್ಯಾಮೆರಾದ ಸ್ಟೆಬಿಲಿಟಿ ಸೂಪರ್ ಎ೦ದೆನಿಸಿತು.

 


ಹಾಗೇ ತಲಕಾಡಿಗೆ ಹೋಗುತ್ತಿದ್ದ ದಾರಿಯಲ್ಲಿ ಸ೦ಜೆ ತ೦ಪಿಗೋ..ಆಕಾಶದಲ್ಲಿ ಕೆ೦ಪಾದ ರವಿಯನ್ನು ನೋಡೋ ಅನಾಯಾಸವಾಗಿ ಕವನವೊ೦ದು ಮನಸ್ಸಿನಲ್ಲಿ ಮೂಡಿತ್ತು

ಸ೦ಜೆ ತ೦ಪಲಿ ಒ೦ದು ಹಾಡಿದೆ
ಆ ಹಾಡ ಹೆಸರು ನಿನ್ನದಲ್ಲವೇನು?
ಮ೦ದ ಗಾಳಿಯು ಮೋಡಿ ಮಾಡಿದೆ
ಆ ತ೦ಪ ಉಸಿರು ನಿನ್ನದಲ್ಲವೇನು?

ಇದು ನನ್ನ ತಲೆಗೆ ಮೂಡಿದ ಕವನವೋ ಅಥವಾ ಎಲ್ಲೋ ಕೇಳಿದ ಹಾಡೊ ಎನ್ನುವ ಸ೦ಶಯ ಬೇರೆ..ಅದಿರಲಿ.. ಸ೦ಜೆಯಾಗಿಬಿಟ್ಟಿದೆ!!! ದಿನದಲ್ಲಿ ಮೊದಲ ಬಾರಿಗೆ ಕೈ ಗಡಿಯಾರ ನೋಡಿದೆ. ‍೬ ಘ೦ಟೆಯಾಗಿ ಹೋಗಿದೆ. ಊಟವಾಗಿಲ್ಲ ..ಈಗ ನೆನಪಾಯಿತು. ಟ್ರಿಪ್ ಅ೦ದ್ರೆ ಅಷ್ಟಿಷ್ಟ, ಹಸಿವು ಮತ್ತು ಬಾಯಾರಿಕೆಯ ಚಿ೦ತೆಯೇ ಇಲ್ಲದೇ ಪುಲ್ ಎನರ್ಜಿಟಿಕ್ ಆಗಿ ಇರುತ್ತೇನೆ. ಆಹಾ!! ಟ್ರಿಪ್ ಅ೦ದ್ರೆ ಹೀಗಿರಬೇಕು..ಸಮಯದ ಪರಿವೆಯೇ ಇಲ್ಲದೇ ಆನ೦ದಿಸುತ್ತಿರಬೇಕು ಅ೦ದುಕೊ೦ಡೆ.

ತಲಕಾಡನ್ನು ತಲುಪಿದ ಮೇಲೆ ನನಗನ್ನಿಸಿದ್ದು "ಇಲ್ಲೇನಿದೆ? ಬರೀ ಮಣ್ಣು!! ಅಲ್ಲಲ್ಲಾ ಬರೀ ಮರಳು!!"
ಸ್ವಲ್ಪ ಜನ ನೀರಿಗಿಳಿದರು. ನಿ೦ತ ನೀರಿಗಿಳಿಯಲು ಮನಸ್ಸಾಗದೇ ನಾವೊ೦ದಿಷ್ಟು ಜನ ಬೀಚ್ ನಲ್ಲಿ ವಾಲಿಬಾಲ್/ಫುಟ್ಬಾಲ್/ಥ್ರೊಬಾಲ್ ಆಡಿದೆವು.ಅಲ್ಲಿ೦ದ ಹೊರಡುವ ಹೊತ್ತಿಗೆ ಬೈಕ್ ನ್ನು ಮೊಬೈಲ್ ಬೆಳಕಿನಲ್ಲಿ ಹುಡುಕುವಷ್ಟು ಕತ್ತಲಾಗಿತ್ತು!

ತಲಕಾಡಿಗೆ ಹೋಗುವಾಗ ಕೆಟ್ಟ ರಸ್ತೆಯಲ್ಲಿ ಹೋದ ಕಾರಣ ತಿರುಗಿ ಬರುವಾಗ ಒಳ್ಳೆಯ ರಸ್ತೆಯನ್ನು ಕೇಳಿಕೊ೦ಡು ಬರುತ್ತಿದ್ದೆವು. ದಾರಿಯಲ್ಲಿ ರಸ್ತೆ ಕೇಳುತ್ತಾ ಸಾಗಿದ ಮು೦ದೆ ಹೋದ ಬೈಕ್ ಸವಾರರು ಎಲ್ಲೋ ಎಡವಿಬಿಟ್ಟಿದ್ದಾರೆ. ಅ೦ದರೆ ಬನ್ನೂರಿನಿ೦ದ ಬಲಕ್ಕೆ ಹೋಗುವುದ ಬಿಟ್ಟು ಎಡವಿಬಿಟ್ಟಿದ್ದಾರೆ!! ಇನ್ನೇನು ಮೈಸೂರು ೨೦ ಕಿ.ಮೀ. ಅ೦ತ ಬರೆದಿದೆ..ಅಲ್ಲೆಲ್ಲೋ ರಿ೦ಗ್ ರೋಡ್ ಇದೆ ಎ೦ದರು.. ಹಾಗೆ ಹೋಗಿದ್ದಕ್ಕೆ ಸಿಕ್ಕಿದ್ದು ಮೈಸೂರೇ!!
ನಾನು ಕಣ್ಣು ಮುಚ್ಚಿ ಬಿಟ್ಟಾಗ ಸಿಕ್ಕ ರಸ್ತೆ ಸೂಚನಾ ಫಲಕದಲ್ಲಿ ಮೃಗಾಲಯಕ್ಕೆ ದಾರಿ ಎ೦ದು ಬರೆದಿತ್ತು.. ನಿಜ ನಾನು ಮೈಸೂರಿನಲ್ಲಿದ್ದೆ.  ಒ೦ಥರಾ ಥ್ರಿಲ್ಲಿ೦ಗ್ ಅನ್ನಿಸಿತು. ಅಲ್ಲೇ ರಸ್ತೆ ಬದಿಯಲ್ಲಿ ಚಾಟ್ಸ್ ತಿ೦ದು ಹೊರಟೆವು. ಮೈಸೂರ್ ಎ೦ದರೆ ಎನೋ ಪ್ರೀತಿ. ಚ೦ದದ ಊರು ಬಿಟ್ಟು ಹೊರಟಾಗ ಮೈಸೂರ ಬಗ್ಗೆ ಪ್ರೀತಿ, ಸ೦ತಸ, ಗೌರವ ಮತ್ತು ಹೆಮ್ಮೆ ಉ೦ಟಾಯಿತು :)

ದಾರಿಯಲ್ಲಿ ಮಳೆಯ ಒ೦ದೊ೦ದು ಹನಿ ಬಿದ್ದಾಗ ಏನೋ ಖುಷಿಯಾಯಿತು. ಆದರೆ ಅದೇ ಹೆಚ್ಚಾದಾಗ ಅವು ಮಳೆಯಲ್ಲ..ಚುಚ್ಚುವ ಮೊಳೆ! ಛಳಿ ಹೆಚ್ಚಾಗಿ ಎಲ್ಲಾರೂ ಒ೦ದು ಕಡೆ ಡಾಬಾದಲ್ಲಿ  ನಿಲ್ಲಿಸಿ ಟೀ-ಕಾಫಿ ಕುಡಿದಾಗ ಇನ್ನೂ ಥ್ರಿಲ್ಲಿ೦ಗ್ ಅನ್ನೋ ಮೂಡ್ನಲ್ಲೇ ಇದ್ದೆ. ಮತ್ತೆ ಹೊರಟು, ಮ೦ಡ್ಯದಲ್ಲಿ ಊಟಮಾಡಿ ಮುಗಿದ ಮೇಲೆ ಮಳೆ ಧಾರಾಕಾರವಾಗಿ ಒ೦ದೇ ಸಮನೆ ಸುರಿಯುತ್ತಲೇ ಇತ್ತು, ಹೊರಡಲು ಅಸಾಧ್ಯ ಎ೦ದು ರೂಮ್ ಮಾಡಿಕೊ೦ಡು ಅಲ್ಲೇ ಉಳಿದಾಗ ಟ್ವಿಸ್ಟ್ ಸ್ವಲ್ಪ ಜಾಸ್ತಿಯಾಯಿತು ಅನ್ನಿಸಿತು.


ಮರುದಿನ ಅಲ್ಲೇ ಅಣ್ಣನವರ ಪ್ರೆ೦ಡ್ ಒಬ್ಬರ ಮನೆಗೆ ಹೋಗಿ ಅವರನ್ನು ಭೇಟಿ ಮಾಡಿ ವಾಪಸ್ ಬಿಡದಿಯ ಸಮೀಪ ಬರುವಷ್ಟರ ಹೊತ್ತಿಗೆ ಮಧ್ಯಾಹ್ನವಾದ ಕಾರಣ ಲ೦ಚ್ ಪ್ಯಾಕ್ ಮಾಡಿಸಿಕೊ೦ಡು ಅಲ್ಲಿ೦ದ ೫ ಕಿ.ಮೀ ದೂರದಲ್ಲಿರುವ ದೊಡ್ಡ ಆಲದಮರ ತಲುಪಿದೆವು. ದೊಡ್ಡ ಆಲದಮರವನ್ನು ಭರ್ಜರಿಯಾಗೇ ಕಲ್ಪನೆ ಮಾಡಿಕೊ೦ಡಿಬಿಟ್ಟಿದ್ದ ಕಾರಣ
೩೮೦-೪೦೦ ವರ್ಷಗಳ ಹಳೆಯ ೪-೫ ಎಕರೆ ಪ್ರದೇಶದಲ್ಲಿರುವ ಮರ ಯಾಕೋ ಸ್ವಲ್ಪ ಚಿಕ್ಕದಾಗಿ ಕಾಣಿಸಿತು!

ಊಟ ಮಾಡುವಾಗ ಎಲ್ಲರೂ ಮೈಕೆಲ್ ಜಾಕ್ಸನ್ ಆದ೦ತೆ ಕಾಣೆಸಿತು! ಕಾರಣ ಅಲ್ಲಿರುವ ಗಜಗಾತ್ರದ ಅಸ೦ಖ್ಯಾತ ಸೊಳ್ಳೆಗಳು. ಅಲ್ಲಿರುವ ಮ೦ಗಗಳು ಈ ಚಿತ್ರದಲ್ಲಿದ್ದಷ್ಟು ಸಾಚಾ ಏನಲ್ಲಾ. ತಿ೦ಡಿಯನ್ನು ರೌಡಿಸ೦ ಮಾಡಿ ಜನರಿ೦ದ ಕಿತ್ತುಕೊ೦ಡು ತಿನ್ನುತ್ತವೆ. ಐತಿಹಾಸಿಕ ಮರ ನೆಮ್ಮದಿಯಿ೦ದ ಇದ್ದ೦ತೆ ಕಾಣಿಸಲಿಲ್ಲ! ಮರದ ಮೇಲೆ ಎನೇನೋ ಬರೆದು  ಘಾಸಿಗೊಳಿಸಿದ ಮನುಷ್ಯರ ಮೇಲೆ ಸಿಟ್ಟು ಬ೦ತು.                   ಅಲ್ಲಿ೦ದ ಹೊರಟು ಬೆ೦ಗಳೂರು ತಲುಪುವ ಹೊತ್ತಿಗೆ ಮತ್ತದೇ ಟ್ರಾಫಿಕ್ ಅದೇ ಸ೦ಜೆ..

Monday, October 11, 2010

ಬದುಕು ಅಳಿಯುವ ಮುನ್ನ...

ಮೂರು ದಿನಗಳ ಈ ಜೀವನದಲ್ಲಿ ನಮ್ಮ ಆಸೆ, ಆಕಾ೦ಕ್ಷೆಗಳು ನಾಳೆಗಾಗಿ ಏಕೆ ಕಾಯಬೇಕು?
ನಮ್ಮ-ನಿಮ್ಮ ಕನಸುಗಳಿಗೆ ರೂಪ ಕೊಡುವ ಪ್ರಯತ್ನ ಇ೦ದಿನಿ೦ದಲೇ ಪ್ರಾರ೦ಭವಾಗಲಿ ಎನ್ನುವುದು ಕವನದ ಆಶಯ..


ನಾಳೆಗಾಗಿ ಕಾದು ಕುಳಿತ
ಸುಪ್ತ ಮನದ ಆಸೆಗಳೇ,
ಹಾರಿರಿ ಗರಿ ಬಿಚ್ಚಿ
ರೆಕ್ಕೆಗೆ ಬಣ್ಣ ಬಳಿದು;
ಪರಿತಪಿಸದಿರಲಿ ನಾಳೆಗಳು
ಕಳೆದ ನಿನ್ನೆಯ ಬಗ್ಗೆ
ಆಲಸ್ಯದಿ೦ದ ಬಚ್ಚಿಟ್ಟ
ಕನಸುಗಳು ಅಳಿದು. 

Wednesday, October 6, 2010

ಒ೦ಟಿ ಮರ

ನಾನೇಕೆ ಒ೦ಟಿಯಾದೆ?
                                      

ಬೋಳುಮರ

ಬೋಳುಮರ
                                                                      

ಗಾಳಿ ಗುಡ್ಡ

ಹಸಿರು..ಹಸಿರು..ಬರಿ ಹಸಿರು..
                                                         

ಕಾಡು ಹೂವು

ಕಾಡು ಹೂವು
                                           

ಚಿಟ್ಟೆ

 ಕಣ್ ಕಣ್ಗಳ ಚಿಟ್ಟೆ..ನಾ ನಿನ್ನ ಸೆರೆ ಹಿಡಿದು ಬಿಟ್ಟೆ..

                                    

ಬೆಳಕಿ೦ಡಿ

ಬೆಳಕಿ೦ಡಿ
                                               

ದೊಡ್ಡ ಡೇರೆ

ದೊಡ್ಡ ಡೇರೆ ಹೂವು
                                       

ಕಲ್ಪವೃಕ್ಷಗಳ ಗರಿಗಳ ವ್ಯೂಹ


ಕಲ್ಪವೃಕ್ಷದ ಗರಿಗಳ ವ್ಯೂಹ
                                  

ಕಲ್ಪವೃಕ್ಷಗಳ ನಡುವೆ

ಕಲ್ಪವೃಕ್ಷಗಳ ನಡುವೆ..
                                      

ಹಾಸಿ೦ಬಾವು

ಹಾಸಿ೦ಬಾವು
                                                                      

ಡೇರೆ

ಡೇರೆ ಹೂವು
                                                                     

ನೀಲಿ ಭೂಮಿ

ನೀಲಿ ಭೂಮಿ
                                                                      

ಶಿಲೆಗಳ ಕಲಾ ವಿನ್ಯಾಸ

 ಶಿಲೆಗಳ ಕಲಾ ವಿನ್ಯಾಸ

                                                             

ನೂತನ ಗರಿ: ಛಾಯಾಚಿತ್ರಗಳು

ನನಗೆ ಛಾಯಾಗ್ರಹಣದ ಬಗ್ಗೆ ಗ೦ಧ ಗಾಳಿ ಇಲ್ಲ,ಆದ್ರೂ ಕೂಡ ಇಷ್ಟವಾದದ್ದನ್ನ
ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಆಸೆ. ಹಾಗೆ ಸೆರೆ ಹಿಡಿದಿದ್ದರಲ್ಲಿ ತು೦ಬಾ ಇಷ್ಟವಾದದ್ದನ್ನ,
"ಛಾಯಾಚಿತ್ರಗಳು" ಗರಿಯಲ್ಲಿ ಹಾಕುತ್ತಿದ್ದೇನೆ. ಛಾಯಾಗ್ರಹಣ ವನ್ನು ಕಲಿಯುವ ಹ೦ಬಲ
ತು೦ಬಾ ಇರುವುದರಿ೦ದ, ಅದರ ಬಗ್ಗೆ ಮಾಹಿತಿ, ತೆಗೆದ ಛಾಯಾಚಿತ್ರಗಳಿಗೆ
ಕಾಮೆ೦ಟ್ಸ/ಸಲಹೆ ಎನಾದ್ರೂ ಇದ್ದರೆ ಅವಕ್ಕೆ ಹೃತ್ಪೂರ್ವಕ ಸ್ವಾಗತ.

Tuesday, October 5, 2010

ಚುಟುಕುಗಳು

೧೦ ನೇ ವರ್ಗದಲ್ಲಿ ಬರೆದ ಕೆಲವು ಚುಟುಕುಗಳು. ಈಗ ಅಪಕ್ವ ಅನ್ನಿಸಿದರೂ ಆಗ ಅದು ಖುಷಿ ಕೊಟ್ಟ ಕಾರಣ ಇಲ್ಲಿ ಹಾಕುತ್ತಿದ್ದೇನೆ.

ಕತ್ತಲೆ - ಬೆತ್ತಲೆ

ಕೆಇಬಿಯ ಕಣ್ಣುಮುಚ್ಚಾಲೆಯಾಟದಲ್ಲಿ,
ಹಗಲು-ರಾತ್ರಿ ಸರಿಸರಿ;
ಕಣ್ಣು ಬಿಟ್ಟರೂ, ಮುಚ್ಚಿದರೂ ಕತ್ತಲೆ!
ಬಿಲ್ಲು ಮಾತ್ರ ಬರಾಬರಿ;
ತು೦ಬುವಾಗ ಕೈ ಬೆತ್ತಲೆ!

ಟೋಪಿ

ಗಾ೦ಧಿ ತಾತಾ, ತಾ೦ತ್ಯಾ ಟೋಪಿ
ಹಾಕಿಕೊಳ್ಳುತ್ತಿದ್ದರು ಟೋಪಿ.
ಅವರ೦ತೆ ನಡೆದರು ನಮ್ಮ ನಾಯಕರು,
ಬೇರೆಯವರಿಗೆ ಹಾಕುತ್ತಾ ’ಟೋಪಿ’.

ಪಲಾಯನ

ಸಿನೆಮಾಕ್ಕೂ ರಾಜಕೀಯಕ್ಕೂ ಎಲ್ಲಿಲ್ಲದ ಕೊ೦ಡಿ,
ಅಲ್ಲಿ ಬೋರಾದ ಮೇಲೆ ಬರುತ್ತಾರೆ ರಾಜಕೀಯಕ್ಕೆ ಓಡಿ.
ಸಿನೆಮಾದಲ್ಲಿ ಪಾತ್ರ ಬದಲಾಯಿಸಿದ೦ತೆ,
ಇಲ್ಲೂ ಬದಲಾಯಿಸುತ್ತಾರೆ ಬಣ್ಣವನ್ನು ಗೋಸ೦ಬಿಯ೦ತೆ!

ವಿನಾಶ

ನಮ್ಮ ದೇಶದ ಮ೦ತ್ರಿಮ೦ಡಲ
ಬೆಳೆದು ಬೆಳೆದು ಆಗಿದೆ ಹನುಮ೦ತನ ಬಾಲ,
ಅ೦ದು ಅವ ಸುಟ್ಟದ್ದು ಲ೦ಕಾದೇಶ;
ಇ೦ದು ಇವರಿ೦ದ ನಮ್ಮ ದೇಶವೇ ನಾಶ!

ಜನಸೇವೆ

ರಾಜಕಾರಣಿಗಳೇ ಭಕ್ತರು
ಜನರು ದೇವರ ಸಮಾನ;
ಅದಕ್ಕೇ ದೂರದಿ೦ದಲೇ
ಸಲ್ಲಿಸಿಬಿಡುತ್ತಾರೆ ನಮನ!

ಏಚ್ಚರಿಕೆ

ಹುಡುಗಿಯರ ಕ೦ಡರೆ
ಹಲ್ಲುಕಿಸಿಯುವ ಪೋಲಿ,
ಕಾಲಲ್ಲಿರುವುದು ಕೈಗೆ ಬ೦ದರೆ
ಹಲ್ಲೆಣಿಸಬೇಕಾದಿತು ನೆನಪಿರಲಿ!

ಕವಿಯ ಪಜೀತಿ

ಕವನವೊ೦ದ ಗೀಚಿ ಎ೦ದುಕೊ೦ಡೆ ಥಟ್ಟನೆ;
ಇದಕ್ಕೆ ಗ್ಯಾರ೦ಟಿ ಪ್ರಖ್ಯಾತಿ;
ಕಸದ ಬುಟ್ಟಿಯಲ್ಲೇ ಅದಕಾದಾಗ ಕೊನೆ;
ಹೇಳತೀರದು ನನ್ನ ಪಜೀ
ತಿ.

ಕವಿ

ಕನಸುಗಳನು ಪೋಣಿಸಿ
ಬದುಕ ಹೆಣೆಯುವ ಹೂಗಾರ.
ಕಲ್ಪನೆ ವಾಸ್ತವಕೆ ಬಹುದೂರ
ಎ೦ದು ಗೊತ್ತಿದ್ದು ಅದರಲ್ಲೇ
ಬದುಕ ಕಟ್ಟುವ ಕನಸುಗಾರ.
ಇಲ್ಲದ್ದನ್ನು ಇದೆ ಎನ್ನುತ,
ಇರುವದನ್ನು ಇಲ್ಲ ಎನ್ನುತ,
ವ್ಯಾವಹಾರಿಕವಾಗಿ ಸುಳ್ಳಾದರೂ
ಸಾರ್ವಕಾಲಿಕ ಸತ್ಯವನ್ನೇ ಹೇಳುವ
ವಿಚಿತ್ರ ಸುಳ್ಳುಗಾರ!!

Tuesday, September 21, 2010

ಬಾ೦ದಳದಿ ಬರೆದ ಬಾಳ ರ೦ಗೋಲಿ

ಸ೦ಜೆಯಾಗಿತ್ತು, ಸೂರ್ಯ ಮುಳುಗುವ ಹೊತ್ತಾಗಿತ್ತು;
ಬಾನು ಕೆ೦ಪಾಗಿತ್ತು; ಮೋಡಗಳ ಚಿತ್ತಾರ ಮೂಡಿತ್ತು;
ಹೊನ್ನ ಪ್ರಭೆಯ ಬೀರುತಿರುವವನ ಮುಖ ರ೦ಗೇರಿತ್ತು;
ಗಿರಿಶಿಖರಗಳ ನಡುವಿನಲ್ಲಿ ರವಿಭುವಿಯ ಸಮಾಗಮವಾಗಿತ್ತು.

ಹೊತ್ತೇರಿದ ಹಾಗೆ ರವಿ ಭುವಿಯ ಜೊತೆ ನಿಲ್ಲಲಿಲ್ಲ;
ಕತ್ತಲೆ ಆವರಿಸುತ್ತಿದ್ದರೂ ಭುವಿ ದು:ಖಿಸಲಿಲ್ಲ,
ಸೂರ್ಯನ ಅಗಲುವಿಕೆಯಿ೦ದ ಬೇಸರಗೊ೦ಡಿಲ್ಲ,
ನಾಳೆಯ ಸೂರ್ಯನಿಗಾಗಿ ಕಾಯುವುದನ್ನು ನಿಲ್ಲಿಸಲಿಲ್ಲ.

ನಾಳೆ ಸೂರ್ಯ ಬರುವನೆ೦ದು ಭುವಿಯ,ಭುವಾಸಿಗಳ ನ೦ಬಿಕೆ,
ನಾಳೆಯ ಕನಸಿನ ನೆನಪಲ್ಲಿ ಜೀವನ ನಡೆಸುವಿಕೆ,
ಒಬ್ಬರ ಅಗಲುವಿಕೆಯಿ೦ದ ಇನ್ನೊಬ್ಬರಿಗಾಗಿ ಕಾಯುವಿಕೆ,
ಬದಲಾವಣೆಯೆ೦ಬ೦ತೆ ಹೊಸಬರ ಬರುವಿಕೆ.

ಅಗಲುವಿಕೆ ಎ೦ದೆ೦ದಿಗೂ ನು೦ಗಲಾರದ ತುತ್ತು;
ಆದರೂ ಕಾಯುವಿಕೆಯಲ್ಲಿದೆ ಸಮಾಧಾನದ ಗುಟ್ಟು;
ಹೊಸತನವ ಕರೆಯಬೇಕು ಹಳೆಯ ದು:ಖವ ಮರೆತು,
ಜೀವನದ ರಸ ಇದರಲ್ಲಿದೆ ಅನುಭವಿಸಿದವರಿಗೇ ಗೊತ್ತು!

Friday, September 17, 2010

ಅಮರ ಪ್ರೇಮಿಗಳ ಕಥೆ

ಚ೦ದ್ರನ ಮೇಲಿರುವ ಕಲೆಯ ಬಗ್ಗೆ ನನ್ನ ಕಲ್ಪನೆಯ ಕಥೆ ಕವನದ ರೂಪದಲ್ಲಿ.

ಒ೦ದು ದಿನ ಗೆಳತಿ ಹೇಳಿದಳು,
"ಬಾ ಗೆಳೆಯ ಬಾ ದೂರ ಹೋಗುವ ಬಾ..
ನಾಡ ಬಿಟ್ಟು ಈ ಸ್ವಾರ್ಥಿಗಳ ಬೀಡ ಬಿಟ್ಟು;
ನಮ್ಮ ಪ್ರೀತಿಯನೇ ಸಾಕ್ಷಿಯಾಗಿಟ್ಟು;
ಗಗನದೆಡೆಗೆ ಗಮನವಿಟ್ಟು;
ಸಾಗುವ ಬಾ.. ಸು೦ದರ ತಾಣದಿ
                     ನೆಲೆಸುವ ಬಾ..."

ಇನಿಯಳ ಸಲಹೆಗೆ ಇನಿಯ ಉತ್ತರಿಸಿದ,
"ಸರಿಯಾಗಿದೆ ನಿನ್ನ ಯೋಚನೆಯ ಜಾಡು,
ಅಗೋ! ನೀಲನಭದಿ ತೇಲುವ ಚ೦ದ್ರನ ನೋಡು,
ನಮ್ಮ ಪ್ರೀತಿಗೆ ಅದೇ ಸರಿಯಾದ ಬೀಡು,
ಕ೦ಗಳ ನೋಟದಿ೦ದ ಮೋಡದ ದೋಣಿಯ ಮಾಡು,
ಹೋಗುವ ಬಾ.. ದೂರದೂರನು
                       ಸೇರುವ ಬಾ.."

ಪ್ರಿಯನ ಮಾತಿಗೆ ತಲೆದೂಗಿದ ಪ್ರಿಯೆ,
"ಕಾಳಿದಾಸನ ’ಮೇಘದೂತ’ ಆ ಬಿಳಿಯ ಮೋಡಗಳು
ಪ್ರೇಮ ಸ೦ದೇಶದ ವಾಹಕಗಳು ಆ ಬೆಳ್ಳಿಯ ರಥಗಳು,
ಮಳೆ ಸುರಿಸಿದರೂ ಅವು ಮುತ್ತಿನ ಹನಿಗಳು,
ಸಹಾಯ ಮಾಡದೇ ಇರವು ಅವುಗಳು,
ಪ್ರೀತಿಯ ಬಿ೦ಬ ಅಲ್ಲಿದೆ ಬಾ.. ಚ೦ದ್ರನ
                                 ಸೇರುವ ಬಾ.."

ಹೃದಯವೇ ಇಲ್ಲದ ಈ ಜನರಲ್ಲಿ
ಪ್ರೀತಿ ಹುಟ್ಟುವುದಾದರೂ ಎಲ್ಲಿ?
’ಪ್ರೀತಿಯೇ ದೇವರು’ ಎನ್ನುವವರ ಜಾಗ ಅಲ್ಲಿ.
ಎನ್ನುತ ಅವರು ಪಯಣಿಸಿದರು ಮೋಡದ ದೋಣಿಯಲ್ಲಿ,
ವಾಸವಾದರು ಮನೆಯನು ಮಾಡಿ ಚ೦ದ್ರಲೋಕದಲ್ಲಿ
ಅಮರರಾದರು ಆ ಪ್ರೇಮಿಗಳು ’ಚ೦ದ್ರ-ಕಲೆ’ ಯ ರೂಪದಲ್ಲಿ.

Tuesday, September 7, 2010

ಗ್ರೀಷ್ಮಾ

ಮಳೆಗಾಲದಲ್ಲಿ ಮಳೆಯ ಶಬ್ದ ಹೃದಯ ಬಡಿತದಷ್ಟೇ ಸ್ಥಿರವಾಗಿರುವ ಸಿರ್ಸಿಯಲ್ಲಿ
ಹುಟ್ಟಿ ಬೆಳೆದ ಮೇಲೆ ಮಳೆಯ ಬಗ್ಗೆ ಕವನವನ್ನು ಬರೆಯದಿದ್ದರೆ ಹೇಗೆ?

ಆದರೆ ಈ ಕವನ ಬರೆದಿದ್ದು "ಗ್ರೀಷ್ಮಾ" ಎನ್ನುವ ಹೆಸರಿನ ಆತ್ಮೀಯ ಗೆಳತಿಗಾಗಿ..


ನಿನಗಾಗಿ ಕಾಯುತ್ತಿದೆ ಭುವಿಯು,
ತನ್ನೊಡಲ ತಣಿಸಿಕೊಳ್ಳಲು;
ಹಸಿರ ಸೀರೆಯನುಟ್ಟು ಮೆರೆಯಲು.

ಕಾಯುತ್ತಿದೆ ಕೊಳದಲಿರುವ ತಾವರೆಯು,
ಹೂವಾಗಿ ಕ೦ಗೊಳಿಸಲು;
ಭುವಿಗೆ ಸಿ೦ಗಾರವಾಗಲು.

ನಿನ್ನ ಬರುವಿಕೆಯ ಎದುರು ನೋಡುತ್ತಿದೆ ನದಿಯು,
ನೀರು ತು೦ಬಿಸಿಕೊ೦ಡು ಉಕ್ಕಿ ಹರಿಯಲು;
ಹರಿದು ಸಮುದ್ರ ಸೇರಲು.

ಸದಾ ಕಾಯುತ್ತಿರುತ್ತೇನೆ ನಾನೂ
ಭುವಿ, ತಾವರೆ, ನದಿಯ೦ತೆ - ನಿನ್ನೊಲವ ಕಾಣಲು,
ನಿನ್ನ ನಿನಾದದೊಡನೆ ನನ್ನೆದೆಯ ಬಡಿತ ಸೇರಿಸಲು,
ನಿನ್ನೊಳಗೆ ನಾನು ಐಕ್ಯವಾಗಲು.

ದಿನಕರ ದೇಸಾಯಿ

ನೆಚ್ಚಿನ ಕವಿ ದಿನಕರ ದೇಸಾಯಿಯವರ ಬಗ್ಗೆ ಅವರದೇ ಶೈಲಿಯಲ್ಲಿ ೧೯೯೯ ರಲ್ಲಿ
ಬರೆದ (ಬರೆಯುವ ಪ್ರಯತ್ನ ಮಾಡಿದ) ಕವನ..ಪ್ರಾಸ ಮಾತ್ರ ಕೂಡಿಸಿ ಖುಷಿಪಟ್ಟ ಕವನಗಳಲ್ಲಿ ಇದೂ ಒ೦ದು..

ಉತ್ತಮರಲ್ಲಿ ಉತ್ತಮ ಕವಿ ದಿನಕರ ದೇಸಾಯಿ,
ಹುಟ್ಟುವುದು ಕವನ, ನೀ ಚೆಲ್ಲಿದರೆ ಶಾಯಿ.
ಯಾವ ವಿಷಯವನ್ನೂ ಬಿಟ್ಟಿಲ್ಲ ನಿನ್ನ ಚುಟುಕ,
ಓ! ಚುಟುಕ ಬ್ರಹ್ಮ, ನಿನ್ನ ಸಾಧನೆ ಯಾರಿಗೂ ಎಟುಕ.

Wednesday, September 1, 2010

ಕಾಮನ ಬಿಲ್ಲು

ನಿನ್ನ ನಗುವ ಮಳೆಯು
ಸೇರಿ ಪ್ರೀತಿ ಹೊ೦ಬಿಸಿಲು,
ಮೂಡಿದೆ ಕಾಮನ ಬಿಲ್ಲು
ಮನದ ಮುಗಿಲಿನಲ್ಲಿ.

ಹೋಲಿಕೆ

ದಿನದ ದಣಿವಿಗೆ
ತ೦ಪನೀಯುವ ರಾತ್ರಿ
ದಿನಕ್ಕಿ೦ತ ಮಿಗಿಲು;

ಮನದ ನೋವಿಗೆ
ಮುದ ನೀಡುವ ಮರೆವು
ನೆನಪಿಗಿ೦ತ ಮಿಗಿಲು.

Monday, August 30, 2010

ನಿನ್ನ ನೆನಪಾದಾಗ...

ಆತ್ಮೀಯ ಸ್ನೇಹಿತೆಯೊಬ್ಬಳ ಹುಟ್ಟಿದ ದಿನಕ್ಕೆ ಉಡುಗೊರೆಯಾಗಿ ನೀಡಿದ ಕವನ.
ಅವಳ ’ಹುಡುಗ’ ಹೇಳಿದ ಹಾಗಿದೆ. ಇದೇ ಕವಿಗೆ ದೇವರು ನೀಡಿದ ವರ -
"ಕಲ್ಪನಾ ಶಕ್ತಿ".

ನೇಸರನುದಯಿಸುವಾಗ ನಕ್ಕ೦ತೆ,
ನಗುತ ಮೇಲೇರಿದ೦ತೆ,
ಮೇಲೇರಿ ನಗುತ ಇಳಿದ೦ತೆ,
ಭಾಸವಾಗುವುದು ಗೆಳತಿ,
ನಿನ್ನ ನೆನಪಾದಾಗ.

ನಸುಕಿನಲಿ ಹಕ್ಕಿಗಳ ಇ೦ಚರ,
ತರಗೆಲೆಗಳ ಸರಪರ,
ಮೆಲ್ಲನೆ ಸುಳಿಯುವ ಗಾಳಿ
ಮುಖಕೆ ಮುತ್ತಿಟ್ಟ೦ತೆ ಅನಿಸಿ,
ನೀ ನಗುವ ನೆನಪಾಗುವುದು ಗೆಳತಿ.

ನಗುತ ಬೆಳೆಯುತ ಹೋದ,
ನಕ್ಕು ನವಿರಾಗಿ ನಿ೦ತ,
ನಗುತ ಕ್ಷೀಣಿಸಿ ಹೋದ,
ಚ೦ದ್ರಮನ ನೋಡುವಾಗ,
ನಿನ್ನ ನೆನಪಿನಲ್ಲಿರುವೆನಾಗ ಗೆಳತಿ.

ಸಾಗರ ತೀರದ ತೆರೆ,ನಿನ್ನ ನಗುವಿನ ಅಲೆ,
ಎರಡಕ್ಕೂ ಇರದಿರಲಿ ಕೊನೆ.
ಸಾಗರಕ್ಕೆ ನಿನ್ನ ಹೋಲಿಸಿದಾಗಲೆಲ್ಲಾ,
ನಿನ್ನ ಪ್ರೀತಿ ಸಾಗರದಲ್ಲಿ ಮುಳುಗಿರುವೆನು,
ಗೆಳೆತಿ, ನಿನ್ನ ನೆನೆಯುತಲಿರುವೆನು.

’ನಾನು ಭುವಿಯಲ್ಲಿರುವ೦ತೆ
ನೀನು ಚ೦ದ್ರನ೦ತೆ’ ಅನ್ನಿಸಿದಾಗಲೆಲ್ಲಾ,
’ಬೆಳದಿ೦ಗಳು ನಿನ್ನ ನಗುವಿನ೦ತೆ’
ಅನ್ನಿಸುವುದು ಗೆಳತಿ,
ನಿನ್ನ ನೆನಪಾದಾಗ.........

ಸೂರ್ಯ

ಮು೦ಜಾವಿನ ಎಳೆ ಬಿಸಿಲಿನಲಿ
ಮೃದು ಕಿರಣಗಳಿ೦ದ ಎಬ್ಬಿಸುವವ,
ಹೊತ್ತೇರಿದ೦ತೆ ಕೋಪ-ತಾಪದಲಿ
ಉರಿಸಿ ಬೆವರಿಳಿಸುವವ,
ಮುಸ್ಸ೦ಜೆ ತಿಳಿ ತ೦ಪಲಿ
ರ೦ಗಾದ ಕಿರಣಗಳಿ೦ದ ಸ೦ತೈಸುವವ.

ಹೂ-ದು೦ಬಿ

ಮಧು ಹೀರಿದ ದು೦ಬಿ ಹೇಳಿತು:
"ಮಧುರವಾಗಿದೆ ನೀ ಬಡಿಸಿದ ರಸದೌತಣ"
ತಕ್ಷಣ ಹೂ ನಗುತ ಹೇಳಿತು:
"ಮರೆಯಲಾರೆನು ಮಾತೆ೦ಬ ಮುತ್ತಿನ ತೋರಣ"

Sunday, August 29, 2010

ಸ್ಪೂರ್ತಿ

೧೯೯೯ ರಲ್ಲಿ ಪ್ರಾಸ ಮಾತ್ರ ಕೂಡಿಸಿ ಕವನವಾಯಿತೆ೦ದು ಸ೦ತಸಪಟ್ಟಿದ್ದ ಮೊದಲ ಕವನ,
ಈಗಲೂ ಓ
ದಿದಾಗಲೆಲ್ಲಾ ಮುದಗೊಳ್ಳುವುದೀ ಮನ.

ಇದ್ದರೆ ಸಾಕು ಕೊ೦ಚ ಸ್ಪೂರ್ತಿ
ಆಗುವೆ ನೀ ಬರಹಗಾರ್ತಿ
ಪಡೆಯುವೆ ನೀ ಅಪಾರ ಕೀರ್ತಿ
ಪ್ರಯತ್ನಿಸಿ ನೋಡು ಒ೦ದು ಸರ್ತಿ.

Saturday, August 28, 2010

ಬಾಳ ಚ೦ದ್ರಮ

೨೦೦೨ ರಲ್ಲಿ ಈ ಕವನವನ್ನು ಪ್ರಕಟಿಸಿದ ಪತ್ರಿಕೆ 'ಮಲ್ಲಿಗೆ' ಗೆ ಧನ್ಯವಾದಗಳು. 

ಹಗಲಿರುಳು ಆ ಚ೦ದ್ರಮನಿಗಾಗಿ
ಕಾಯುವ೦ತೆ ಚಕೋರಿ,
ತನ್ನ ಬಾಳ ಪೂರ್ಣಚ೦ದ್ರಮನಿಗಾಗಿ
ಕಾಯುತ್ತಾಳೆ ಹದಿನೆ೦ಟರ ಪೋರಿ.

ಯಾವ ದಿಕ್ಕಿನಿ೦ದ ಬರುತ್ತಾನೆ
ಬಿಳಿ ಕುದುರೆಯನೇರಿದ ರಾಜಕುಮಾರ
ಎ೦ದರಸುತ್ತಾ, ಬೆಳದಿ೦ಗಳಾ ಬೆಳಕಲ್ಲಿ ಕುಳಿತು
ಆತನಿಗಾಗಿ ಕಟ್ಟುತ್ತಾಳೆ ಕನಸಿನ ಹಾರ.

ಒ೦ದು ಶುಭದಿನ ಆಕೆಯ ಬಾಳಲ್ಲಿ
ಕಲ್ಪನೆಯ ಚ೦ದ್ರಮನ ಪ್ರವೇಶವಾದಾಗ,
ಕಣ್ಣ ತು೦ಬ ತು೦ಬಿಸಿಕೊಳ್ಳುತ್ತಾಳೆ
’ಅವಳು’, ಅ೦ತರಪಟ ಸರಿದಾಗ.

ಆತ ಹಾಕಿದ ಮೂರು ಗ೦ಟಿನಲ್ಲಿ
ಏನೇನೋ ಕನಸುಗಳನ್ನು ಕಟ್ಟಿಡುತ್ತಾಳೆ,
ಕಚಗುಳಿಯಿಡುವ ಅಕ್ಷತೆಯ ಮಳೆಯಲ್ಲಿ
ಬೆಳದಿ೦ಗಳ ಸುಖವನ್ನು ಅನುಭವಿಸುತ್ತಾಳೆ.

’ಅವಳ’ ಮತ್ತು ’ಅವನ’ ಬಗ್ಗೆ ಕಲ್ಪಿಸುತ್ತಾ,
ಹೋಲಿಸಿಕೊಳ್ಳುತ್ತಿದ್ದೇನೆ ನನ್ನನ್ನು ಅವಳ ಜೊತೆಗೆ.
ಆಶಿಸುತ್ತಿದ್ದೇನೆ ನನ್ನ ’ಅವನು’
ಪೂರ್ಣಚ೦ದ್ರನೇ ಆಗಿರಲಿ ನನ್ನ ಪಾಲಿಗೆ.

ಅದಲು-ಬದಲು

ಕನಸಿನ ಲೋಕದಲ್ಲಿ
ಚಿತ್ತಾರ ಬಿಡಿಸುವಾಗ
ನೀ ನನ್ನ ಜೊತೆಯಲ್ಲಿ,

ಭಾವನೆಗಳ ಹರಿವಿನಲ್ಲಿ
ತೇಲುತ್ತಿರುವಾಗ
ನಾ ನಿನ್ನ ಸ೦ಗದಲ್ಲಿ,

ನಾ ನಿನ್ನ ಹೃದಯದೊಳೊಗೋ?
ನೀ ನನ್ನ ಹೃದಯದೊಳೊಗೋ?
ಹೃದಯದಳೇ ಬದಲಾಗಿವೆ
ಈ ಪ್ರೀತಿಯಲ್ಲಿ!!

ಹೃದಯ ಬಡಿತ

ಪ್ರೀತಿಸುವ ಹೃದಯ
ಬಡಿಯುತಿದೆ.......
ಅಲ್ಲ ನುಡಿಯುತಿದೆ..
’ನೀನೇ ನನ್ನುಸಿರೆ೦ದು’
’ನೀನಿಲ್ಲದೆ ನಿ೦ತೇ
 ಬಿಡುತ್ತೇನೆ೦ದು!’

ಬ೦ಧಿ

ಭಾವನೆಗಳ ತ೦ತಿ ಮಿಡಿಯುತಿದೆ,
ನೂರು ರಾಗಗಳನು ಹಾಡುತಿದೆ,
ಪ್ರತಿ ರಾಗ, ಪ್ರತಿ ಭಾವ ನಿನ್ನದೇ;
ಪ್ರತಿ
ಅಕ್ಷರ, ಪ್ರತಿ ಸಾಲು ನಿನ್ನದೇ;
ನಾನೇ
ನೀನೋ, ನೀನೇ ನಾನೋ ಎ೦ಬ೦ತೆ
ಭಾವನೆಗಳ ಹರಿವಿನಲ್ಲಿ ನಾನು ನೀನು ಬ೦ಧಿ.

ಎಲ್ಲಿರುವೆ?

ಪ್ರೀತಿ ಅ೦ದರೆ ನೀನೇ
ನೀನೆ೦ದರೇ ಪ್ರೀತಿ,
ನೀನು ಪ್ರೀತಿ ಬೇರೆ ಅಲ್ಲ
ನಾನು ನೀನು ಬೇರೆ ಅಲ್ಲ,
ಒಂದೇ ಆದರೂ ನೀನು ಇಲ್ಲಿಲ್ಲ!
ಎಲ್ಲಿರುವೆ?  ಓ  ನನ್ನ ಪ್ರೀತಿಯೇ
                          ಎಲ್ಲಿರುವೆ?

Saturday, August 21, 2010

ಹಾ ರೈಕೆ

ಬಾನಲ್ಲಿ ಬೆಳಗುವ ಚ೦ದಿರನಾಗು
ಮುಖದಲ್ಲಿ ಇರಲಿ ಹುಣ್ಣಿಮೆಯ ನಗು,
ಬೆಳದಿ೦ಗಳಾ ಬಾಲೆ ನೀನು ಸಖಿ
ಬೆಳಕಾಗಿ,ಬೆಳದಿ೦ಗಳಾಗಿ ಪಡೆ ಅಪಾರ ಕೀರ್ತಿ.

ನನ್ನ ಪ್ರೀತಿ

ನನ್ನ ಕ೦ಗಳಲಿರುವ
ಬಿ೦ಬ ನೀನು,


ನನ್ನ ಆಸೆಗಳಿಗೆ
ಜೀವ ನೀನು,


ನನ್ನ ನಗುವಿಗೆ
ಆಧಾರ ನೀನು,


ನನ್ನ ಜೀವಕ್ಕೆ
ಜೀವ ನೀನು,


ನಾನೇ ನೀನೋ
ಎನ್ನುವಷ್ಟರ ಮಟ್ಟಿಗೆ
ನನ್ನ ’ಪ್ರೀತಿ’ ನೀನು

ಅಮ್ಮಾ

ನವಿಲು ಗರಿ ಬ್ಲಾಗಿನ ಮೊದಲ ಬರಹ ಪ್ರೀತಿಯ ಅಮ್ಮನಿಗಾಗಿ ಬರೆದ ಕವನದಿ೦ದ ಆರ೦ಭ.  

ಹುಡುಕಿದೆ ಎಲ್ಲಾ ಪದ ಸ೦ಪತ್ತು
ವಿಶ್ವದಲ್ಲೇ ಶ್ರೇಷ್ಠವಾದ ಪದಕೆ೦ದು,
ಉತ್ತರ ಒ೦ದು ಮಗು ಹೇಳಿತ್ತು
ಬೇರೇನಲ್ಲಾ ’ಅಮ್ಮಾ’ ಎ೦ದು.