Friday, June 6, 2014

ಟ್ಯುಲಿಪ್ ಹೂಗಳು..

ಟ್ಯುಲಿಪ್ ಹೂಗಳನ್ನು ನೋಡಲು Wooden Shoe Tulip Farm ಗೆ ಹೋಗಿದ್ವಿ ಸ್ವಲ್ಪ ದಿನಗಳ ಹಿಂದೆ. ೧೫-೨೦ ಎಕರೆಗಳಷ್ಟು ಹೂಗಳು. ಬಣ್ಣ ಬಣ್ಣದ ಹೂಗಳ ಫೋಟೊ ತೆಗೆದಷ್ಟು ಸಾಲದು.  ೧೯೫೦ ರಿಂದ  ಹೂಗಳನ್ನು ಬೆಳೆಯುತ್ತಿದ್ದರೂ ಮಾರಾಟದಲ್ಲಿ ಅಷ್ಟೇನೂ ಲಾಭವಿರಲಿಲ್ಲವಂತೆ. ೧೯೮೫ ರಲ್ಲಿ ಇದನ್ನು ಎಂಟ್ರಿ ಫಿ ತೆಗೆದುಕೊಂಡು ಪ್ರದರ್ಶನಕ್ಕೆ ಬಿಟ್ಟರಂತೆ. ಸಾಮಾನ್ಯವಾಗಿ ಒಂದು ತಿಂಗಳು ನಡೆಸುವ ಈ ಪ್ರದರ್ಶನದಲ್ಲಿ ತುಂಬಾ ಜನರು ಫೋಟೋಗ್ರಫಿ ಗೋಸ್ಕರನೇ  ಬರುತ್ತಾರೆ. ಇವರ ವೆಬ್ಸೈಟ್ ಮತ್ತು ಫೇಸ್ಬುಕ್ ನಲ್ಲಿ ಆ ದಿನದ ವಾತವರಣ, ಹೂ ಗಳ ವಿವರ ಮತ್ತು ಆ ದಿನದ ಚಟುವಟಿಗೆಗಳನ್ನು ಹಾಕುತ್ತಾರೆ. ಮಕ್ಕಳಿಗಾಗಿ ವಿವಿಧ ತರಹವಾದ ಚಟುವಟಿಗೆಗಳನ್ನು ನಡೆಸುತ್ತಾರೆ. ಹೀಗೆ ಒಂದು ಕಾಲದಲ್ಲಿ ನಷ್ಟದಲ್ಲಿದ್ದ ಫಾರ್ಮ್ ಈಗ ಯದ್ಯಾ ತದ್ವಾ ಲಾಭ ಮಾಡುತ್ತಿದೆ.ಅಮೇರಿಕಾಕ್ಕೆ ಬರುವ ಮುಂಚೆ ನನಗೆ ಅನ್ನಿಸುತ್ತಿತ್ತು, "ಅಮೇರಿಕ ಮುಂದುವರಿದ ದೇಶ ಇಲ್ಲಿ ಕೃಷಿ ಮಾಡುವವರು ಯಾರು ?" ಎಂದು. ನಮ್ಮ ದೇಶದಲ್ಲಿ ರೈತರೆಲ್ಲಾ ಬಡವರು. ಹೊಟ್ಟೆ ತುಂಬಿಸಿಕೊಳ್ಳಲಾಗದೇ ರೈತಾಪಿ ಬಿಡುವ ಜನರೇ ಜಾಸ್ತಿ. ಆದರೆ ಇಲ್ಲಿ ಹಾಗಲ್ಲ. ಅಗ್ರಿಕಲ್ಚರ್ ಮಾಡುವವರಿಗೆ ಎಲ್ಲಾ ಸೈಕರ್ಯ ವಿದೆ. ನೂರಾರು ಎಕರೆ ಭೂಮಿಯಿದೆ. ಅತ್ಯಾಧುನಿಕ ರೀತಿಯಲ್ಲಿ ಬೆಳೆ ಬೆಳೆಯುತ್ತಾರೆ. ಎಲ್ಲ ಕೆಲಸಗಳನ್ನು ಯಂತ್ರಗಳೇ ಮಾಡುತ್ತವೆ. ಗದ್ದೆಯಲ್ಲಿ ಕೆಲಸ ಮಾಡುವವರೇ ಹೆಚ್ಚಾಗಿ ಕಾಣಿಸುವುದಿಲ್ಲ. ಇವರ ಮನೆಯ ಮುಂದೆ ೪-೫ ಕಾರ್ ಗಳು ನಿನ್ತಿರುತ್ತವೆ.  ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನ ಭೂಮಿ ಅತಿ ಫಲವತ್ತಾದದ್ದು . ನೀರಿಗಂತೂ ಭರವೇ ಇಲ್ಲ.  ಹೇರಳವಾದ ನೈಸರ್ಗಿಕ ಸಂಪನ್ಮೂಲ ಮತ್ತು ಮನುಷ್ಯನ ಬುದ್ಧಿವಂತಿಕೆಯಿಂದ ಮಾಡಿಕೊಂಡ ಸೌಕರ್ಯದಿಂದ ಇಲ್ಲಿ ಮಾನವ ಸಂಪನ್ಮೂಲದ ಕೊರತೆಯಿದ್ದರೂ ಕೃಷಿ ಇನ್ನೂ ಕೂಡ ಇಲ್ಲಿನ ಪ್ರಮುಖ ಉದ್ಯೋಗ. ನಮ್ಮ ದೇಶದಲ್ಲೂ ಇಂತಹ ಒಂದು ದಿನ ಬರಲಿ ಎಂದು ಆಶಿಸುತ್ತೆನೆ.

Sunday, May 18, 2014

ಹಪ್ಪಳದ ಜೊತೆ ಊರ ನೆನಪು!

ಹಲಸಿನ ಕಾಯಿ ಹಪ್ಪಳ ಕರಿಯುತ್ತಿದ್ದೆ ಅಮ್ಮ ಮಾಡಿಕೊಟ್ಟಿದ್ದು. ೨೫-೩೦ ಹಪ್ಪಳಗಳ ಒಂದೊಂದು ಕಟ್ಟನ್ನು ನೀಟಾಗಿ ಮಾಡಿದ್ದರು. ಹಪ್ಪಳವನ್ನು ಕಟ್ಟಿದ್ದು ಬಟ್ಟೆಯ ದಾರದಲ್ಲಿ.  ಅಮ್ಮನ ಸೀರೆಯಲ್ಲವೇ? ಇದು ನನ್ನ ಚೂಡಿದಾರ ಕೂಡಾ ಆಗಿತ್ತಲ್ಲ ಅಂದುಕೊಂಡೆ !

ಹಾಸ್ಟೆಲ್ಲಿನಲ್ಲಿ ಇಂಜಿನೀಯರಿಂಗ್ ಓದುತ್ತಿದ್ದ ದಿನಗಳು. ಖರ್ಚು ಜಾಸ್ತಿ. ಗೆಳತಿಯರ ನೋಡಿ ನನಗೂ ಹೊಸ ಬಟ್ಟೆ ಹಾಕಿಕೊಳ್ಳುವ  ಆಸೆ ಬೇರೆ ಜಾಸ್ತಿ. ಪ್ರತಿ ಸಲ ಊರಿಗೆ ಹೋಗಿದ್ದಾಗ ಅಮ್ಮನ ಸೀರೆ ಪೆಟ್ಟಿಗೆಯನ್ನು ತೆಗೆದು ನೋಡುತ್ತಿದ್ದೆ. ಪ್ರತಿ ಸಲ ಅವೇ ಸೀರೆಗಳು. ಮಾದುವೆ ಸಮಾರಂಭದ ದಿನಗಳಲ್ಲಿ ೧-೨ ಹೊಸ ಸೀರೆಗಳು ಅವರಿವರು ಗಿಫ್ಟ್ ಆಗಿ ಕೊಟ್ಟಿದ್ದು ಪೆಟ್ಟಿಗೆ ಸೇರುತ್ತಿದ್ದವು. ಅವುಗಳಲ್ಲಿ ಹಳೆಯದು  ಒಂದನ್ನು ಆಯ್ದು ಚೂಡಿದಾರ ಹೊಲಿಸಿಕೊಳ್ಳುತ್ತಿದ್ದೆ. ತುಂಬಾ ತೆಳು ಸೀರೆಯಾದರೆ ತಾತನ ಬಿಳಿ ಪಂಚೆ ಲೈನಿಂಗ್ ಆಗುತ್ತಿತ್ತು!  ಅಮ್ಮ ಎಷ್ಟೇ ಇಷ್ಟವಾದ ಸೀರೆಯಾದರೂ ನಾನು ಕೇಳಿದಾಗ "ಆ ಕಲರ್ ನಂಗೆ ಸರಿ ಹೋಗೋದಿಲ್ಲ, ನಿಂಗೆ ಚಂದ ಕಾಣೊತ್ತೆ" ಎನ್ನುತ್ತಿದ್ದರು.  ಹೀಗೆ ಕಡಿಮೆ ಖರ್ಚಿನಲ್ಲಿ ನನಗೆ ಬಟ್ಟೆಗಳು ಆಗುತ್ತಿದ್ದವು. ಹಳೆಯದೆಂದು ಆ ಚೂಡಿದಾರವನ್ನು ಬಿಟ್ಟಾಗ, ಅಮ್ಮ ಅದನ್ನು  ಕಟ್ ಮಾಡಿ ದಾರದ ತರಹ ಉಪಯೋಗಿಸುತ್ತಿದ್ದರು. "ನೈಲಾನ್ ಅಲ್ಲವೇ , ಹರಿಯೋದೇ ಇಲ್ಲ" ಎನ್ನುತ್ತಿದ್ದರು. ಬೇಲಿ ಕಟ್ಟುವುದರಿಂದ ಹಿಡಿದು ಹಪ್ಪಳದ ಕಟ್ಟು ಕಟ್ಟುವ ತನಕ ಉಪಯೋಗಿಸಬಹುದಿತ್ತು.  ಹೀಗೆ ಎಲ್ಲ ಪದಾರ್ಥಗಳ ಮರುಬಳಕೆ ಜಾಸ್ತಿ ನಮ್ಮ ಕಡೆ. ನಮ್ಮ ಅಮ್ಮ ಅಚ್ಚುಕಟ್ಟಾಗಿ ಸಂಸಾರ ಮಾಡುವುದರಲ್ಲಿ ಎತ್ತಿದ ಕೈ! ತುಂಬಾ ಜಾಣೆ ಕೂಡ. ಅಮ್ಮಂಗೆ ನಾವೆಲ್ಲಾ MTech ಅಮ್ಮ ಎಂದು ರೇಗಿಸುತ್ತಿದ್ದೆವು. ಹೀಗೆ ಹಲವು ನೆನಪುಗಳು ಸುತ್ತಿಕೊಂಡವು.

ಅಮ್ಮನ ನೋಡುವ ಬಯಕೆ ಜಾಸ್ತಿಯಾಗುತ್ತಿದೆ. ಯಾವಾಗ ಊರಿಗೆ ಹೋಗುತ್ತಿನೋ! ಅಮ್ಮ ಅಡಿಗೆ ಮಾಡುವಾಗಲೆಲ್ಲ ಅಡಿಗೆ ಕಟ್ಟೆಯ ಮೇಲೆ ಕೂತು ವಟ ವಟ ಮಾತಾಡಬೇಕೆನ್ನುವ ಆಸೆ. ಹಾಗೆ ಅಮ್ಮನ ತೊಡೆಯ ಮೇಲೆ ಮಲಗಿ ಕನ್ನಡ ಸೀರಿಯಲ್ ಒಂದು ದಿನದ್ದು ನೋಡಿದರೂ ವರ್ಷದ್ದೆಲ್ಲ ಕಥೆ ಕೇಳಬಹುದು. ಇದೇ ತರಹ ಎಷ್ಟೋ ನನಗಿಷ್ಟವಾದದ್ದನ್ನು ಮಾಡಬಹುದು. ಸೋಮಾರಿ ಕಟ್ಟೆ ಯನ್ನಂತೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ.  ಅಮಾವಾಸ್ಯೆ ರಾತ್ರಿಯ ಸ್ಟಾರ್ ವಾಚಿಂಗ್ ಮತ್ತು ಹುಣ್ಣಿಮೆ ರಾತ್ರಿಯ ಮೂನ್ ವಾಚಿಂಗ್ ಎರಡನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹಲಸಿನ ಕಾಯಿಯ ವಿಷಯಕ್ಕೆ ಬಂದರಂತೂ... ಊರಿನಲ್ಲಿರುವ ವೆರೈಟಿ ಎಲ್ಲೂ ಇಲ್ಲ. ಹಲಸಿನ ಕಾಯಿ ಹಪ್ಪಳ, ಹಲಸಿನಕಾಯಿ ಚಿಪ್ಸ, ಕೆಂಡದಲ್ಲಿ ಸುಟ್ಟ ಹಲಸಿನ ಬೇಳೆ.... ಹಲಸಿನ ಹಣ್ಣಿನ ಕಡುಬು, ದೋಸೆ.  ಹಲಸಿನ ಕಾಯಿ ಪಲ್ಯ, ಹುಳಿ . ಇಷ್ಟೇ ಏಕೆ ಹಲಸಿನ ಬೇಳೆಯ ಸಿಪ್ಪೆಯ ಪಲ್ಯ! ಮರದಿಂದ ಆಗ ತಾನೇ ಇಳಿಸಿದ ಹಲಸಿನ ಹಣ್ಣನ್ನು ಸುತ್ತಲೂ ಕೂತು ತಿನ್ನುವ ಮಜವೇ ಬೇರೆ! ಹೀಗೆ ದಿನವೆಲ್ಲ ಅಮ್ಮನ ಮತ್ತು ಊರಿನ ನೆನಪು. ಈ ಅಮ್ಮಂದಿರೇ ಹಾಗೆ ತಾವು ಕಳಿಸಿಕೊಟ್ಟ ಚಿಕ್ಕ ಚಿಕ್ಕ ಪದಾರ್ಥದಲ್ಲಿ ಬೆಟ್ಟದಷ್ಟು ಪ್ರೀತಿ ತುಂಬಿರುತ್ತಾರೆ ಅದಕ್ಕೆ ಹೀಗೆ "ಹಲಸಿನ ಕಾಯಿ ಹಪ್ಪಳ" ದಿನವೆಲ್ಲ ಕಾಡುತ್ತದೆ!